ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ನೀಡಿ – ಬಿಜನಗೇರಾ ಗ್ರಾಮದ ಅನ್ನದಾತರ ಒತ್ತಾಯ

ರಾಯಚೂರು: ತಾಲೂಕಿನ ಬಿಜನಗೇರಾ ಗ್ರಾಮದ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ವ್ಯತ್ಯಯವಾಗದಂತೆ ಸರಬರಾಜು ಮಾಡಲು ಆಗ್ರಹಿಸಿ ರೈತ-ಕೃಷಿ ಕಾರ್ಮಿಕರ ಸಂಘಟನೆ ಹಾಗೂ ಎಐಡಿವೈಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಉಭಯ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ನಗರದ ಅಂಬೇಡ್ಕರ್ ವೃತ್ತದಿಂದ ಗ್ರಾಮದ ರೈತರು ಮತ್ತು ಯುವಕರು ಜೆಸ್ಕಾಂ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ಎಇಇ ಹನುಮೇಶ ಅವರ ಮೂಲಕ ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಮನವಿ ಸಲ್ಲಿಸಿದರು.

ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯ ಸರಿಪಡಿಸಲು ಒಬ್ಬ ಲೈನ್‌ಮನ್ ನೇಮಿಸಬೇಕು, ಈಗಿರುವ ಲೈನ್ ದುರಸ್ತಿಗೊಳಿಸಬೇಕು. ಬೇಸಿಗೆಯಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಬೋರ್‌ವೆಲ್ ಆಶ್ರಿತ ರೈತರು ತರಕಾರಿ ಬೆಳೆಯಲು ಸಮಸ್ಯೆ ಅನುಭವಿಸಿದರು. ಲೈನ್‌ಮನ್ ಇಲ್ಲದ ಕಾರಣ ಸಮಸ್ಯೆ ಎದುರಾಗಿದೆ. ಈಗಾಗಲೆ ಮುಂಗಾರು ಆರಂಭವಾಗುತ್ತಿದ್ದು, ಸಮಸ್ಯೆಗೆ ಮೇಲಧಿಕಾರಿಗಳು ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಎಇಇ, ‘ನಾಳೆಯೇ ಒಬ್ಬ ಲೈನ್‌ಮನ್ ನೇಮಿಸಲಾಗುವುದು, ಒಂದು ವಾರದಲ್ಲಿ ಲೈನ್ ದುರಸ್ತಿ ಮಾಡಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಆರ್‌ಕೆಎಸ್ ಜಿಲ್ಲಾ ಸಂಚಾಲಕ ರಾಮಣ್ಣ ಮರ‌್ಕಂದಿನ್ನಿ , ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಚನ್ನಬಸವ ಜಾನೇಕಲ್, ಮಲ್ಲನಗೌಡ, ಗ್ರಾಮದ ಮುಖಂಡರಾದ ಹುಸೇನಪ್ಪ, ಮುರುಳಿ, ಬಡೇಸಾಬ್, ಹನುಮಂತ, ವೀರೇಶ, ರಮೇಶ, ಕ್ರಷ್ಟಪ್ಪ, ಆಂಜಿನೇಯ, ಪರಿಸೆಪ್ಪ, ವೆಂಕಟೇಶ, ಶ್ರೀನಿವಾಸ, ಸೋಮೇಶ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *