13ಕ್ಕೆ ಪ್ರತಿಭಟನಾ ರ‌್ಯಾಲಿ ನಡೆಸಲು ನಿರ್ಧಾರ

ಹೈಕ ಭಾಗದಲ್ಲಿ ಪಡೆದ ಶೈಕ್ಷಣಿಕ ಸಾಲಮನ್ನಾಕ್ಕೆ ಒತ್ತಾಯ

ರಾಯಚೂರು: ಹೈಕ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪಡೆದಿರುವ ಶೈಕ್ಷಣಿಕ ಸಾಲಮನ್ನಾಕ್ಕೆ ಒತ್ತಾಯಿಸಿ ಫೆ.13ರಂದು ಪ್ರತಿಭಟನಾ ರ‌್ಯಾಲಿ ನಡೆಸಲು ಕಲಬುರಗಿಯ ಗುರುಪಾದೇಶ್ವರ ಕಾಲೇಜಿನಲ್ಲಿ ಮಂಗಳವಾರ ನಡೆದ ಶೈಕ್ಷಣಿಕ ಸಾಲ ಪಡೆದ ಪಾಲಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಉನ್ನತ ವ್ಯಾಸಂಗಕ್ಕಾಗಿ ಪಡೆದ ಶೈಕ್ಷಣಿಕ ಸಾಲದ ಬಡ್ಡಿ ಹಣ ತುಂಬುವುದಾಗಿ 2009, 2014ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಆದೇಶದಂತೆ ಹಣ ಬಿಡುಗಡೆ ಮಾಡದ ಕಾರಣ ಬ್ಯಾಂಕ್‌ಗಳು ದುಬಾರಿ ಬಡ್ಡಿ ವಸೂಲಿ ಮಾಡುತ್ತಿವೆ. 371ಜೆ ಅಡಿ ಹೈಕ ಭಾಗದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪಡೆದ ಶೈಕ್ಷಣಿಕ ಸಾಲ ಪೂರ್ಣ ಮನ್ನಾ ಮಾಡಬೇಕು. ಆದೇಶದಂತೆ ಶೈಕ್ಷಣಿಕ ಸಾಲದ ಬಡ್ಡಿ ಹಣವನ್ನು ಸಾಲ ಪಡೆದ ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಬೇಕು. ಬ್ಯಾಂಕ್‌ಗಳು ಸಾಲ ವಸೂಲಾತಿ ನಿಲ್ಲಿಸಬೇಕು ಎಂದು ಪಾಲಕರು ಆಗ್ರಹಿಸಿದರು.

ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಪ್ರತಿಭಟನಾ ರ‌್ಯಾಲಿ ನಂತರ ಉಳಿದ ಜಿಲ್ಲೆಯಲ್ಲಿ ಪ್ರತಿಭಟನೆ ನಂತರ ದೆಹಲಿ ಪ್ರಧಾನಿ ನಿವಾಸದ ಮುಂದೆ ಧರಣಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ.ಅಂಬಲಗಿ, ಮುಖಂಡರಾದ ಸೂರ್ಯಕಾಂತ ಜವಣಗಿ, ಬಸವರಾಜ ಸರಾಟೆ, ಮಹ್ಮದ್ ಜಾಫರ್, ಅಮರನಾಥ ಹಾಗೂ ಹೈಕ ಭಾಗದ ಜಿಲ್ಲೆಗಳ ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳ ಪಾಲಕರು ಇದ್ದರು.