ಬಡ್ತಿ ಮೀಸಲು ತೀರ್ಪು ಸ್ವಾಗತಿಸಿ ವಿಜಯೋತ್ಸವ

ರಾಯಚೂರು: ಪರಿಶಿಷ್ಟ ಜಾತಿ, ಪಂಗಡದ ಬಡ್ತಿ ಮೀಸಲು ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪು ಸ್ವಾಗತಿಸಿ ರಾಜ್ಯ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ವಿಜಯೋತ್ಸವ ಆಚರಿಸಿತು.

ಸಮಿತಿ ರಾಜ್ಯ ಅಧ್ಯಕ್ಷ ಶಿವಶಂಕರ ಮಾತನಾಡಿ, ಎಸ್ಸಿ, ಎಸ್ಟಿ ಸಮುದಾಯದ ನೌಕರರಿಗೆ ಸಂವಿಧಾನ ಬದ್ಧವಾದ ಹಕ್ಕುಗಳನ್ನು ದೊರೆಯದಂತೆ ಮೇಲ್ವರ್ಗದ ಮನಸುಗಳು ಕೆಲಸ ಮಾಡುತ್ತಾ ಬಂದಿವೆ. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಬಡ್ತಿ ಮೀಸಲು ವಿಷಯಕ್ಕೆ ಸಂಬಂಧಿಸಿ 2006ರಲ್ಲಿ ಎಂ.ನಾಗರಾಜ ಎನ್ನುವವರು ಬಡ್ತಿ ಮೀಸಲು ಕಲಂ 16ರ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ನ್ಯಾಯಾಲಯ ಬಡ್ತಿ ಮೀಸಲು ಪರ ಆದೇಶ ಮಾಡಿತ್ತು. ಆದರೆ, ಕೆಲ ಮಾನದಂಡಗಳನ್ನು ಹಾಕಿತ್ತು. ಮಾನದಂಡಗಳನ್ನು ನೆಪವಾಗಿಟ್ಟುಕೊಂಡು ಪವಿತ್ರ ಎನ್ನುವವರು 2010ರಲ್ಲಿ ನ್ಯಾಯಾಲಯಕ್ಕೆ ಹೋಗಿದ್ದರು. ಸರ್ಕಾರ ಅಂಕಿ ಅಂಶಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ವಿಳಂಬ ಮಾಡಿದ್ದರಿಂದ ವಿಷಯ ಜಟಿಲವಾಯಿತು ಎಂದರು.

ಕೊನೆಗೂ ಎಸ್ಟಿ, ಎಸ್ಟಿ ನೌಕರರಿಗೆ ನ್ಯಾಯ ಸಿಕ್ಕಿದ್ದು, ನಾವು ಯಾರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ. ಸಂವಿಧಾನ ಬದ್ಧವಾಗಿ ಸಿಗಬೇಕಾದ ಹಕ್ಕನ್ನು ಪಡೆಯುತ್ತಿದ್ದೇವೆ. ಒಂದು ವೇಳೆ ಹಿಂದುಳಿದ ಅಲ್ಪ ಸಂಖ್ಯಾತ ಜಾತಿಗಳು ಬಡ್ತಿ ಮೀಸಲಿಗೆ ಹೋರಾಟ ನಡೆಸಿದರೆ ಸಮಿತಿ ಬೆಂಬಲ ಸೂಚಿಸುತ್ತದೆ ಎಂದು ಶಿವಶಂಕರ ಹೇಳಿದರು.

ಸಮಿತಿ ರಾಜ್ಯ ಕಾರ್ಯದರ್ಶಿ ಶಿವಕುಮಾರ, ಮುಖಂಡರಾದ ಗೋಪಾಲಕೃಷ್ಣ, ಮೋಹನ್, ತಾಯರಾಜ್ ಮರ್ಚೆಟಹಾಳ, ಯಲ್ಲಪ್ಪ ಜಾಲಿಬೆಂಚಿ, ರಾಜೇಂದ್ರ ಜಲ್ದಾರ್, ಬಾಬು, ಲಕ್ಷ್ಮಿಕುಮಾರ, ವೆಂಕಟೇಶ ಬೇವಿನಬೆಂಚಿ, ಶ್ರೀನಿವಾಸ ಮರಡ್ಡಿ, ಪ್ಯಾಟೆಪ್ಪ, ಕೋರೆನಲ್, ಯಂಕಪ್ಪ ಪಿರಂಗಿ, ಹನುಮಂತಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *