ತಪಸ್ಸಿನಿಂದ ಮಾತ್ರ ಸಂಗೀತ ಒಲಿಯುವುದು

ರಾಯಚೂರು:  ಸಂಗೀತ ಕಲಿಯುವುದು ಸುಲಭವಲ್ಲ. ಅದಕ್ಕೆ ಶ್ರದ್ಧೆ, ತಪಸ್ಸಿನ ಮನಸ್ಥಿತಿ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಬಿ.ಶರತ್ ಹೇಳಿದರು.

ನಗರದ ಸ್ವರಸಂಗಮ ಸಂಗೀತ ವಿದ್ಯಾಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಂ.ಸಿದ್ಧರಾಮ ಜಂಬಲದಿನ್ನಿ ಅವರ ಜನ್ಮ ಶತಮಾನೋತ್ಸವ ಹಾಗೂ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಹೋರಾತ್ರಿ ಸಂಗೀತ ಸಮ್ಮೇಳನಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಸಂಗೀತದಿಂದ ಸಿಗುವ ಅನುಭಾವ ಮತ್ತೆಲ್ಲೂ ಸಿಗದು. ರಾಯಚೂರು ಶರಣ, ದಾಸರ ನೆಲೆಬೀಡು. ಇಲ್ಲಿ ಹುಟ್ಟಿ ಬೆಳೆದು ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಪಂ.ಸಿದ್ಧರಾಮ ಜಂಬಲದಿನ್ನಿ ನಾಡಿಗೆ ಚಿರಪರಿಚಿತರು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸತತ ಪರಿಶ್ರಮ ಅಗತ್ಯ ಎನ್ನುವುದನ್ನು ಜಂಬಲದಿನ್ನಿ ಅವರ ಶಿಷ್ಯರಾದ ಪಂ.ನರಸಿಂಹಲು ವಡವಾಟಿ ತೋರಿಸಿಕೊಟ್ಟಿದ್ದಾರೆ ಎಂದರು.

ಹೆಚ್ಚುವರಿ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಂ.ಮಹದೇವಯ್ಯ ಮಾತನಾಡಿ, ಸಂಗೀತ ಪರಂಪರೆ ಉಳಿಸುತ್ತಿರುವ ಸಿದ್ಧರಾಮ ಜಂಬಲದಿನ್ನಿ ಅವರ ಶಿಷ್ಯ ನರಸಿಂಹಲು ವಡವಾಟಿ ಅವರ ಗುರುಪರಂಪರೆ ಇತರರಿಗೆ ಮಾದರಿಯಾಗಿದೆ. ಜಂಬಲದಿನ್ನಿ ಅವರ ಹೆಸರಲ್ಲಿ ಟ್ರಸ್ಟ್ ರಚಿಸುವ ಚಿಂತನೆಗಳು ನಡೆಯಲಿ ಎಂದರು.

ಸೋಮವಾರಪೇಟೆ ಹಿರೇಮಠದ ಶ್ರೀಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ದೆಹಲಿಯ ರಾಜನ್ ಮತ್ತು ಸಾಜನ್ ಮಿಶ್ರಾ ಸೇರಿ ವಿವಿಧ ಸಂಗೀತ ಕಲಾವಿದರಿಂದ ಅಹೋರಾತ್ರಿ ಸಂಗೀತ ಸಮ್ಮೇಳನ ನಡೆಯಿತು. ಎಸ್ಪಿ ಡಿ. ಕಿಶೋರಬಾಬು, ಡಾ.ಶಿವಪ್ರಸಾದ್, ಪಂ.ಡಾ.ನರಸಿಂಹಲು ವಡವಾಟಿ ಇತರರು ಇದ್ದರು.