ರಾಯಚೂರು: ಕರ್ನಾಟಕದಿಂದ ತೆಲಂಗಾಣಕ್ಕೆ ಭತ್ತ ಸಾಗಿಸಲು ನಿರ್ಬಂಧ ಹಾಕಲಾಗಿದ್ದು, ಕೂಡಲೇ ನಿರ್ಬಂಧವನ್ನು ತೆರವುಗೊಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಕರ್ನಾಟಕ-ತೆಲಂಗಾಣ ಗಡಿ ಭಾಗದ ಕೃಷ್ಣಾ ಬ್ರಿಡ್ಜ್ ಬಳಿ ಗುರುವಾರ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಂದ ಭತ್ತದ ವ್ಯಾಪರಿಗಳು ತೆಲಂಗಾಣ ರಾಜ್ಯಕ್ಕೆ ವ್ಯಾಪಾರ ಮಾಡಲು ಹೋಗುವ ಸಂದರ್ಭದಲ್ಲಿ ರಾಯಚೂರಿನ ಶಕ್ತಿನಗರ ಸಮೀಪ ಗಡಿ ಚೆಕ್‌ಪೋಸ್ಟ್ ಹಾಗೂ ಯಾದಗಿರಿಯ ಜಲಾಲ್‌ಪುರ ಚೆಕ್‌ಪೋಸ್ಟ್‌ನಲ್ಲಿ ಕರ್ನಾಟಕದ ಭತ್ತದ ಲಾರಿಗಳನ್ನು ತಡೆದು ನಿಲ್ಲಿಸಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದೆ ಕೂಡಲೇ ಈ ಸಮಸ್ಯೆಗೆ ಪರಿಹಾರ ಒಸಗಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ತೆಲಂಗಾಣದಿಂದ ರಾಯಚೂರು ಮಾರುಕಟ್ಟೆಗೆ 30 ರಿಂದ 40 ಸಾವಿರ ಚೀಲ ಭತ್ತ ಯಾವುದೇ ನಿರ್ಬಂಧವಿಲ್ಲದೇ ಬರುತ್ತಿದೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಭತ್ತದ ದರ ಕಡಿಮೆಯಾಗುತ್ತಿದೆ. ರಾಜ್ಯದ ರೈತರಿಗೆ ನಷ್ಟ ಉಂಟಾಗಿ ಇಲ್ಲಿನ ರೈತರು ತೆಲಂಗಾಣಕ್ಕೆ ಭತ್ತ ಸಾಗಿಸುತ್ತಿದ್ದಾರೆ. ಆದರೆ ತೆಲಂಗಾಣ ರಾಜ್ಯದಲ್ಲಿ ಕರ್ನಾಟಕ ರೈತರು ತೆಗೆದುಕೊಂಡು ಹೋಗುತ್ತಿರುವ ಭತ್ತದ ಲಾರಿಗಳನ್ನು ಹಾಗೂ ಇತರೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಕೂಡಲೇ ಭತ್ತದ ಲಾರಿ, ವಾಹನಗಳಿಗೆ ನಿರ್ಬಂಧ ಹೇರುತ್ತಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ಬಸವರಾಜ ಪಾಟೀಲ್, ಲಿಂಗಸುಗೂರು ತಾಲೂಕಾಧ್ಯಕ್ಷ ಮಲ್ಲಣ್ಣ ಗೌಡೂರು, ಪ್ರಮುಖರಾದ ಮಲ್ಲಿಕಾರ್ಜುನ ರಾವ್, ವೆಂಕಟೇಶ ಸೇರಿದಂತೆ ಇತರರಿದ್ದರು.