ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕ

<ಬೆಂಬಲಿಗರಿಗೆ ಮೊಟ್ಟೆ ವಿತರಣೆ ಟೆಂಡರ್ ನೀಡುವಂತೆ ಒತ್ತಡ ಪ್ರಭಾರ ಡಿಡಿಯಿಂದ ಸಿಇಒಗೆ ದೂರು>

ರಾಯಚೂರು: ತಮ್ಮ ಬೆಂಬಲಿಗರಿಗೆ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಸಲು ಟೆಂಡರ್ ನೀಡಿಲ್ಲ ಎಂಬ ಕಾರಣಕ್ಕೆ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ತಮಗೆ ಧಮ್ಕಿ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಡಿಡಿ ನಾಗರಾಜ್ ಜಿಪಂ ಸಿಇಒಗೆ ಆಡಿಯೊ ಕ್ಲಿಪ್ ಜತೆಗೆ ಲಿಖಿತ ದೂರು ನೀಡಿದ್ದಾರೆ.

ನ. 14ರಂದು ಕರೆ ಮಾಡಿದ ಶಾಸಕ ಶಿವನಗೌಡ ನಾಯಕ ಇಲಾಖೆ ನಿಯಮ ಉಲ್ಲಂಘಿಸಿ ತಮ್ಮ ಬೆಂಬಲಿಗರಿಗೆ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ವಿತರಿಸುವ ಟೆಂಡರ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ನಾನು ಒಪ್ಪದ ಕಾರಣ ಧಮ್ಕಿ ಹಾಕಿದ್ದಾರೆ . ಕೆಳಮಟ್ಟದ ಪದ ಬಳಸಿದ್ದಾರೆ. ಸರ್ಕಾರಕ್ಕೆ ಲಿಖಿತ ದೂರು ನೀಡುವುದಾಗಿ ಬೆದರಿಸಿದ್ದಾರೆ. ಹೀಗಾಗಿ ಡಿಡಿ ಹುದ್ದೆಯಿಂದ ಬಿಡುಗಡೆ ಮಾಡುವಂತೆ ನಾಗರಾಜ್ ಒತ್ತಾಯಿಸಿದ್ದಾರೆ.

ಬೇರೆ ಅಧಿಕಾರ ವಹಿಸಿ: ಜಿಲ್ಲೆಯ ಜನಪ್ರತಿನಿಧಿಯೊಬ್ಬರು ನ.14ರಂದು ಕರೆ ಮಾಡಿ ಮಾತನಾಡಿದ ಭಾಷೆಯಿಂದ ಮಾನಸಿಕವಾಗಿ ನೋವು ಉಂಟಾಗಿದೆ. ನಿಯಮ ಉಲ್ಲಂಘಿಸಿ ಕೆಲಸ ಮಾಡಲು ನನಗೆ ಮನಸಿಲ್ಲ. ಇತ್ತ ದಕ್ಷತೆಯಿಂದ ಕೆಲಸ ನಿರ್ವಹಿಸಲು ಆಗುತ್ತಿಲ್ಲ. ಜತೆಗೆ ಆರೋಗ್ಯ ಸಮಸ್ಯೆಯಿಂದ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ಡಿಡಿ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಸಿಇಒ ನಲಿನ್ ಅತುಲ್‌ಗೆ ನ. 16ರಂದು ಸಲ್ಲಿಸಿದ ಲಿಖಿತ ದೂರಿನಲ್ಲಿ ಪ್ರಭಾರ ಡಿಡಿ ಅಳಲು ತೋಡಿಕೊಂಡಿದ್ದಾರೆ.

ಜನಪ್ರತಿನಿಧಿಯ ಧಮ್ಕಿ ಹಿನ್ನೆಲೆಯಲ್ಲಿ ಹಿಂದಿನ ಮೂವರು ಸಿಡಿಪಿಒಗಳು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಶಾಸಕರು ಮನಸಿಗೆ ಬಂದಂತೆ ನಿಂದಿಸಿರುವುದು ನೋವು ತಂದಿದೆ. ಡಿಡಿ ಪ್ರಭಾರ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಸಿಇಒಗೆ ದೂರು ಸಲ್ಲಿಸಿದ್ದೇನೆ. ಸೂಕ್ತ ರಕ್ಷಣೆ ಒದಗಿಸುವಂತೆ ಎಸಿಗೆ ಮನವಿ ಮಾಡಲಾಗುವುದು.
| ಆರ್.ನಾಗರಾಜ್, ಡಿಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ.

https://youtu.be/MR-h6L_iBwQ