ಪಿಂಚಣಿಗಾಗಿ ರಕ್ತದಾನ ಮಾಡಿದ ಎನ್‌ಪಿಎಸ್ ನೌಕರರು

<ಜಿಲ್ಲಾದ್ಯಂತ ಬ್ಲಡ್ ಡೊನೆಟ್ ಸರ್ಕಾರದ ವಿರುದ್ಧ ಆಕ್ರೋಶ > ಹಳೇ ಪಿಂಚಣಿ ಮುಂದುವರಿಸಲು ಒತ್ತಡ>

 

ರಾಯಚೂರು: ಅವೈಜ್ಞಾನಿಕ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಮುಂದುವರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಬುಧವಾರ ರಕ್ತದಾನ ಮಾಡುವ ಮೂಲಕ ರಕ್ತ ಕೊಟ್ಟೇವು ಪಿಂಚಣಿ ಬಿಡೆವು ಎಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿತು.

ಸ್ಪಂದನಾ ಭವನದಲ್ಲಿ ಸಂಘದ ನೂರಾರು ನೌಕರರು ರಕ್ತದಾನ ಮಾಡಿದ ನಂತರ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. 2006ರ ನಂತರದಲ್ಲಿ ಸರ್ಕಾರಿ ನೌಕರಿಗೆ ಸೇರಿದ ನೌಕರರಿಗೆ ಹಿಂದೆ ನೀಡುತ್ತಿದ್ದ ನಿಶ್ಚಿತ ಪಿಂಚಣಿ ಯೋಜನೆ ರದ್ದುಗೊಳಿಸಿ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆ ಷೇರು ಮಾರುಕಟ್ಟೆ ಆಧಾರಿತವಾಗಿದ್ದು, ಷೇರು ಕುಸಿದಲ್ಲಿ ನೌಕರರ ಮತ್ತು ಅವರನ್ನು ನಂಬಿದ ಕುಟುಂಬ ಬೀದಿಪಾಲಾಗಲಿದೆ.

ನೌಕರರ ಹಣಕ್ಕೆ ಕನಿಷ್ಠ ಭದ್ರತೆ ಹಾಗೂ ನಿಖರ ಪಿಂಚಣಿ ಬಗ್ಗೆ ಸ್ಪಷ್ಟತೆ ನೀಡಲು ಎನ್‌ಪಿಎಸ್ ಯೋಜನೆ ವಿಫಲವಾಗಿದೆ. ಇದರ ನಿರ್ವಹಣೆ 3ನೇ ಸಂಸ್ಥೆಗೆ ವಹಿಸಿರುವುದರಿಂದ ಸರ್ಕಾರ ಮತ್ತು ನೌಕರರ ನಡುವೆ ಭಾರಿ ಕಂದಕ ನಿರ್ಮಾಣವಾಗಿದೆ. ಕೂಡಲೇ ಸಿಎಂ ಕುಮಾರಸ್ವಾಮಿ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಎನ್‌ಪಿಎಸ್ ಯೋಜನೆ ರದ್ದುಪಡಿಸಿ ಹಿಂದೆ ಜಾರಿಯಲ್ಲಿದ್ದ ನಿಶ್ಚಿತ ಪಿಂಚಣಿ ಯೋಜನೆಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಮಹಾಂತೇಶ ಬಿರಾದಾರ, ಪದಾಧಿಕಾರಿಗಳಾದ ಜಗದೀಶ್ ಕೋಳಬಾಳ್, ನಾಗಪ್ಪ, ಜಗದೀಶ ಪಾಟೀಲ್, ಈರಣ್ಣ, ಶರಣಬಸವ, ಸಂಜೀವಕುಮಾರ, ನಸೀಮಾ ಬೇಗಂ, ಬಸವರಾಜ, ಸುಭಾಷಚಂದ್ರ, ರಾಮಸ್ವಾಮಿ, ಪ್ರಸನ್ನಕುಮಾರ, ವಾಸುದೇವ, ಮಲ್ಲೇಶ ನಾಯಕ ಇತರರಿದ್ದರು.