ಪ್ರತ್ಯೇಕ ರಾಜ್ಯ ಎಂದರೆ ಗ್ರಾಮ ಪಂಚಾಯಿತಿ ಎಂದು ತಿಳಿದುಕೊಂಡಿದ್ದಾರಾ ಶ್ರೀರಾಮುಲು?

ರಾಯಚೂರು: ಶ್ರೀರಾಮುಲುಗೆ ಪ್ರತ್ಯೇಕ ರಾಜ್ಯ ಪದದ ಅರ್ಥವೇ ಗೊತ್ತಿಲ್ಲ. ಪ್ರತ್ಯೇಕ ರಾಜ್ಯ ಎಂದರೆ ಅವರು ಗ್ರಾಮ ಪಂಚಾಯಿತಿ ಎಂದು ತಿಳಿದುಕೊಂಡಿದ್ದಾರಾ ಎಂದು ಪಶು ಸಂಗೋಪನಾ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ವೆಂಕಟರಾವ್​ ನಾಡಗೌಡ ಆಕ್ಷೇಪ ವ್ಯಕ್ತಪಡಿದ್ದಾರೆ.

ಸೈದಾಪುರ ಪಟ್ಟಣದಲ್ಲಿ ಶನಿವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು,  ಪ್ರತ್ಯೇಕ ರಾಜ್ಯ ಎಂದರೆ ಹುಡುಗಾಟವೆ? ಅದೇನು ಗ್ರಾಮ ಪಂಚಾಯಿತಿ ಅಂದುಕೊಂಡಿದ್ದಾರಾ? ಬಿಜೆಪಿಯವರು ರೈತರನ್ನು ಮುಂದಿಟ್ಟುಕೊಂಡು ಪ್ರತ್ಯೇಕ ರಾಜ್ಯದ ಬಗ್ಗೆ ಹೇಳಿಕೆ ಕೊಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಂದು ರಾಜ್ಯ ಅಸ್ತಿತ್ವಕ್ಕೆ ಬರಬೇಕಾದರೆ ಅದರ ಹಿಂದೆ ಎಷ್ಟು ಶ್ರಮವಿರುತ್ತದೆ ಎಂಬುದೇ ಶ್ರೀರಾಮುಲುಗೆ ತಿಳಿದಿಲ್ಲ. ಹೀಗಿರುವಾಗ ಅವರು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ವೆಂಕಟರಾವ್​ ನಾಡಗೌಡ ಟಾಂಗ್ ನೀಡಿದ್ದಾರೆ.

ಬೆಳಗಾವಿಯಲ್ಲಿ ಸುವರ್ಣಸೌಧದ ಕಲ್ಪನೆ ಮೂಡಿಸಿದ್ದು, ಮೊದಲ ಬಾರಿಗೆ ಬೆಂಗಳೂರಿನಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ್ದು ಹಾಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಎಂಬುದನ್ನು ಹೋರಾಟಗಾರರು ಅರಿತಿರಲಿ ಎಂದರು.

ರೈತರ ಸಾಲಮನ್ನಾಗೆ ಸಂಬಂಧಿಸಿ ಬಿ.ಎಸ್.ಯಡಿಯೂರಪ್ಪಗೆ ಪಾದಯಾತ್ರೆ ನಡೆಸುವ ನೈತಿಕತೆಯಿಲ್ಲ. ಮೊದಲು ಕೇಂದ್ರದ ಮೇಲೆ ಅವರು ಒತ್ತಡ ತಂದು ಪ್ರಧಾನಿ ನೀಡಿದ್ದ ಭರವಸೆಯಂತೆ ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿಗೆ ತರಲು ಮುಂದಾಗಬೇಕು. ದೇಶದ ಯಾವುದೇ ರಾಜ್ಯದಲ್ಲಿ ರೈತರ ಸಾಲಮನ್ನಾ ಆಗಿಲ್ಲ. ಕೇವಲ ಕರ್ನಾಟಕದಲ್ಲಿ ಮಾತ್ರ ಇದು ಸಾಧ್ಯವಾಗಿದೆ. ಅದಕ್ಕಾಗಿ ಸರ್ಕಾರವು ಸಾವಿರಾರು ಕೋಟಿ ರೂ. ಭರಿಸುತ್ತಿದ್ದರೂ ಗೊಂದಲ ಸೃಷ್ಟಿಸುವ ಕೆಲಸ ನಡೆದಿದೆ. ರೈತ ವಿರೋಧಿ ಕೇಂದ್ರ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿನ ಸಾಲಮನ್ನಾ ಮಾಡಲು ಮೀನಾಮೇಷ ಎಣಿಸುತ್ತಿದೆ ಎಂದು ದೂರಿದರು.

ಹೋರಾಟ ಹಿಂಪಡೆಯಲು ಮನವಿ: ಐಸಿಸಿ ಸಭೆ ನಿರ್ಣಯದಂತೆ ಮೊದಲು ಕುಡಿವ ನೀರಿಗಾಗಿ, ನಂತರ ಕೃಷಿಗೆ ಹರಿಸಲಾಗುವುದು. ಹೊರಗುತ್ತಿಗೆ ಟೆಂಡರ್ ತಡೆ ಹಿಡಿಯುವ ಭರವಸೆ ನೀಡಿದ್ದರೂ ತುಂಗಭದ್ರಾ ನೀರಾವರಿ ವಲಯ ಕಾರ್ಮಿಕರು ಹೋರಾಟ ನಡೆಸುತ್ತಿರುವುದು ರೈತರಿಗೆ ಮಾಡುತ್ತಿರುವ ಅನ್ಯಾಯ. ಹೋರಾಟಗಾರರು ಕೂಡಲೇ ಸೇವೆಗೆ ಹಾಜರಾಗುವಂತೆ ಮನವಿ ಮಾಡಲಾಗುತ್ತಿದೆ. ಹೋರಾಟ ಹಿಂದಕ್ಕೆ ಪಡೆಯದಿದ್ದರೆ ಪರ್ಯಾಯ ಮಾರ್ಗೋಪಾಯಗಳತ್ತ ಸರ್ಕಾರ ಗಮನ ಹರಿಸಲಿದೆ.

ಕಾಮಗಾರಿ ಮುಗಿಯುವ ಮುನ್ನವೇ ತರಾತುರಿಯಲ್ಲಿ ಉದ್ಘಾಟನೆ ಹೆಸರಿನಲ್ಲಿ ಸಮಾರಂಭ ಆಯೋಜಿಸಿ ಪ್ರಚಾರ ಪಡೆಯುವುದರಿಂದ ಜನರಿಗೆ ಉಪಯೋಗವಾಗದು. ರಾಯಚೂರು ಜಿಲ್ಲೆಯಲ್ಲಿ ಮಳೆಯ ಅಭಾವದ ಬಗ್ಗೆ ಅರಿವಿದ್ದು, ಮಳೆಗಾಲ ಸಂಪೂರ್ಣ ಮುಗಿದಿದ್ದರೆ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಬಹುದಾಗಿತ್ತು

| ವೆಂಕಟರಾವ್ ನಾಡಗೌಡ ಪಶು ಸಂಗೋಪನಾ ಮತ್ತು ಒಳನಾಡು ಮೀನುಗಾರಿಕೆ ಸಚಿವ