ಪ್ರತ್ಯೇಕ ರಾಜ್ಯ ಬೇಡಿಕೆ ಬಿಜೆಪಿಯ ಹಿಡನ್ ಅಜೆಂಡಾ

 ಅಖಂಡ ಕರ್ನಾಟಕ ಒಡೆಯುವ ತಂತ್ರಗಾರಿಕೆ ಸಲ್ಲ >>

ರಾಯಚೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಬಿಜೆಪಿಯ ಹಿಡನ್ ಅಜೆಂಡಾ ಆಗಿದೆ. ಹೈಕ ಭಾಗದ ಹಿಂದುಳಿದ ಅಂಕಿಸಂಖ್ಯೆಗಳನ್ನು ಮುಂದಿಟ್ಟು ಮುಂಬೈ ಕರ್ನಾಟಕದ ನಾಯಕರು ಅನುಕೂಲ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಜನ ಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ರಾಘವೇಂದ್ರ ಕುಷ್ಟಗಿ ಆರೋಪಿಸಿದ್ದಾರೆ.

ನರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಣ್ಣ ರಾಜ್ಯಗಳಿದ್ದಲ್ಲಿ ಅಧಿಕಾರ ಹಿಡಿಯಬಹುದು ಎಂದು ಬಿಜೆಪಿ ಈ ತಂತ್ರ ಮಾಡುತ್ತಿದೆ. ಜಾರ್ಖಂಡ್, ಛತ್ತೀಸ್‌ಘಡ ಮಾದರಿ ಕರ್ನಾಟಕವನ್ನು ಎರಡು ಭಾಗ ಮಾಡಲು ಹೊರಟಿದೆ. ಬಿಜೆಪಿ ನಾಯಕರು ಹಿಂಬಾಗಿಲಿಂದ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುವ ಬದಲು ತಮ್ಮ ಪಕ್ಷದ ಕೇಂದ್ರ ಸಮಿತಿ ಅನುಮತಿ ಪಡೆದು ನೇರವಾಗಿ ಹೋರಾಟ ಮಾಡಲಿ. ಅದನ್ನು ಬಿಟ್ಟು ಅಖಂಡ ಕರ್ನಾಟಕವನ್ನು ಒಡೆಯುವ ತಂತ್ರಗಾರಿಕೆಯನ್ನು ಕೈಬಿಡಬೇಕು. ಉಮೇಶ ಕತ್ತಿ ಮತ್ತು ಇತರರು ಬೆಳಗಾವಿಯನ್ನು ಕೇಂದ್ರವಾಗಿಟ್ಟುಕೊಂಡು ಪ್ರತ್ಯೇಕ ರಾಜ್ಯದ ಬೇಡಿಕೆಯಿಟ್ಟಿದ್ದು, ಇದರಿಂದ ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಪ್ರಯೋಜನವಿಲ್ಲ. ಇದರಿಂದ 371 (ಜೆ) ಪ್ರಕಾರ ಸಿಗಲಿರುವ ಸೌಲಭ್ಯಗಳಿಗೂ ಕುತ್ತು ಬರಲಿದೆ ಎಂದರು.

ಪರಿಷತ್ ಪದಾಧಿಕಾರಿಗಳಾದ ಜಾನ್‌ವೆಸ್ಲಿ, ಖಾಜಾ ಅಸ್ಲಂ ಅಹ್ಮದ್, ಪರಪ್ಪ ನಾಗೋಲಿ, ವೀರಣ್ಣ ಭಂಡಾರಿ, ಮಾರೆಪ್ಪ ಉಪಸ್ಥಿತರಿದ್ದರು.

ಪ್ರತ್ಯೇಕವಾದರೆ ದಕ್ಷಿಣದವರಿಗೆ ಕಷ್ಟ: ಉತ್ತರ ಕರ್ನಾಟಕದ ನೈಸರ್ಗಿಕ ಸಂಪತ್ತನ್ನು ದೂರವಿಟ್ಟು ಬೆಂಗಳೂರು, ಮೈಸೂರು ಭಾಗದ ಜಿಲ್ಲೆಗಳು ಪ್ರತ್ಯೇಕ ರಾಜ್ಯವಾಗಿ ಇರಲು ಸಾಧ್ಯವಿಲ್ಲ. ರಾಜ್ಯಕ್ಕೆ ಬೆಳಕು ನೀಡುವ ಆರ್‌ಟಿಪಿಎಸ್, ವೈಟಿಪಿಎಸ್, ಬಿಟಿಪಿಎಸ್ ನಮ್ಮಲ್ಲಿಯೇ ಇದ್ದು, ಪ್ರತ್ಯೇಕ ರಾಜ್ಯವಾದಲ್ಲಿ ಅವರು ಕತ್ತಲೆಯಲ್ಲಿ ಕಳೆಯಬೇಕಾಗಲಿದೆ. ಚಿನ್ನ ಉತ್ಪಾದಿಸುವ ಏಕೈಕ ಗಣಿ ನಮ್ಮ ಜಿಲ್ಲೆಯಲ್ಲಿದೆ. ಸಿಮೆಂಟ್ ಉತ್ಪಾದನೆಗೆ ಕಲಬುರಗಿ ಜಿಲ್ಲೆ, ಉದ್ದಿನ ಬೆಳೆಗೆ ಬೀದರ್ ಹೆಸರುವಾಸಿಯಾಗಿದ್ದು, ಕಬ್ಬಿಣ ಅದಿರು ದೊರೆಯುವ ಬಳ್ಳಾರಿ ಜಿಲ್ಲೆಗಳು ಒಂದಾಗಿ ಪ್ರತ್ಯೇಕ ರಾಜ್ಯವಾದರೆ ದಕ್ಷಿಣ ಕರ್ನಾಟಕದ ಜನರ ನಿದ್ದೆಗೆಡಲಿದೆ.

ಮುಖ್ಯಮಂತ್ರಿಗಳು ಕೂಡಲೇ ಹೈಕ ಶಾಸಕರ ಮತ್ತು ಹೋರಾಟಗಾರರ ಸಭೆ ಕರೆದು ನಮ್ಮಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ಪಡೆದು ಈ ಭಾಗದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕು.
– ರಾಘವೇಂದ್ರ ಕುಷ್ಟಗಿ ಜನ ಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ

===== *** =====