ಪ್ರತ್ಯೇಕ ರಾಜ್ಯಕ್ಕಾಗಿ ಬಂದ್‌ಗೆ ಹೈಕ ಬೆಂಬಲವಿಲ್ಲ

 ಇಲ್ಲಿನ ಲಾಭ ಕಸಿದುಕೊಂಡ ಮುಂಬೈ ಕರ್ನಾಟಕದವರು >>

ರಾಯಚೂರು: ಮುಂಬೈ ಕರ್ನಾಟಕವನ್ನು ಉತ್ತರ ಕರ್ನಾಟಕ ಎನ್ನುವವರು ಆ.2ರಂದು ಕರೆ ನೀಡಿರುವ ಬಂದ್‌ಗೆ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಂದ ಬೆಂಬಲವಿಲ್ಲ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಡಾ.ರಜಾಕ್ ಉಸ್ತಾದ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈಕ ಜಿಲ್ಲೆಗಳಿಗೆ ದೊರೆತ ಸೌಲಭ್ಯಗಳನ್ನು ಮುಂಬೈ ಕರ್ನಾಟಕ ಜಿಲ್ಲೆ ನಾಯಕರು ಕಬಳಿಸಿದ್ದು, ಅವರು ನಡೆಸಿರುವ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ. ಅಧಿಕಾರ ವಂಚಿತ ರಾಜಕಾರಣಿಗಳು ನಡೆಸುತ್ತಿರುವ ಪ್ರತ್ಯೇಕ ರಾಜ್ಯದಿಂದ ಹೈಕ ಜಿಲ್ಲೆಗಳಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಆಗಿರುವುದರಿಂದ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯಕ್ಕಾಗಿ ನಡೆಸುತ್ತಿರುವ ಬಂದ್‌ಗೆ ಬೆಂಬಲ ನೀಡದಿರಲು ನಿರ್ಧರಿಸಲಾಗಿದೆ ಎಂದು ಡಾ.ರಜಾಕ್ ಉಸ್ತಾದ್ ತಿಳಿಸಿದರು.

ಸಂಘಟನೆಗಳ ಮುಖಂಡರಾದ ಬಸವರಾಜ ಕಳಸ, ಅಂಬಣ್ಣ ಅರೋಲಿ, ವೀರೇಶ ಹೀರಾ, ಶಿವಕುಮಾರ ಯಾದವ್, ಅಶೋಕಕುಮಾರ ಜೈನ್, ಖಲೀಲ್ ಪಾಶಾ, ಹುಸೇನ್ ಬಾಷಾ, ಮಹ್ಮದ್ ರಫಿ ಇದ್ದರು.

ಯೋಜನೆ ಲಾಭ ಕಸಿದುಕೊಂಡರು…: ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ರಾಯಚೂರಿಗೆ ಮಂಜೂರು ಆಗಬೇಕಿದ್ದ ಐಐಟಿಯನ್ನು ಧಾರವಾಡ ಜಿಲ್ಲೆಯವರು ಕಸಿದುಕೊಂಡರು. ಸಂವಿಧಾನದ ವಿರುದ್ಧವಾಗಿ 371 (ಜೆ) ವ್ಯಾಪ್ತಿಯಡಿ ಗದಗ ಜಿಲ್ಲೆ ಹಳ್ಳಿಗಳನ್ನು ಸೇರಿಸುವ ಪ್ರಯತ್ನ ನಡೆಯಿತು. ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗೆ ದಕ್ಕಬೇಕಾದ 18 ಟಿಎಂಸಿ ಅಡಿ ನೀರನ್ನು ಗದಗ ಜಿಲ್ಲೆಗೆ ಪಡೆದು ನಮಗೆ ವಂಚಿಸಲಾಯಿತು. ಉತ್ತರ ಕರ್ನಾಟಕದ ಹೆಸರಿನಲ್ಲಿ ಮುಂಬೈ ಕರ್ನಾಟಕದ ಜಿಲ್ಲೆಗಳು ಅತಿ ಹೆಚ್ಚಿನ ಅನುದಾನ ಪಡೆದಿದ್ದು, ಈ ನಮ್ಮ ಭಾಗದ ಜನರನ್ನು ಭಾವನಾತ್ಮಕವಾಗಿ ಬಳಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನವನ್ನು ಬಂದ್ ಮೂಲಕ ನಡೆದಿದೆ ಎಂದು ಹೇಳಿದರು.

60 ವರ್ಷಗಳಾದರೂ ಕರ್ನಾಟಕ ಏಕೀಕರಣದ ಉದ್ದೇಶ ಈಡೇರಿಲ್ಲ. ರಾಜ್ಯವಾಳಿದ ಸರ್ಕಾರಗಳು ಜನರ ಭಾವನೆ ಅರ್ಥೈಸಿಕೊಳ್ಳಲು ವಿಫಲವಾಗಿವೆ. ಪ್ರಾದೇಶಿಕ ಅಸಮಾನತೆ ಸೃಷ್ಟಿಸಿದ್ದರಿಂದ ಪ್ರತ್ಯೇಕ ರಾಜ್ಯದ ಬೇಡಿಕೆ ಬೆಳೆಯುವಂತೆ ಮಾಡಿದೆ. ಎಚ್.ಡಿ.ಕುಮಾರಸ್ವಾಮಿ ಸಿಎಂ ಆದ ನಂತರದಲ್ಲಿ ಪ್ರತ್ಯೇಕ ರಾಜ್ಯದ ಕೂಗಿ ಹೆಚ್ಚಾಗಿ ಕೇಳಿ ಬರುತ್ತಿದೆ. ಆದರೆ, ರಾಜ್ಯದಲ್ಲಿ ಎಲ್ಲ ರೀತಿಯಿಂದಲೂ ಅನ್ಯಾಯಕ್ಕೆ ಒಳಗಾಗಿದ್ದು ಹೈಕ ಜಿಲ್ಲೆಗಳು. ಈ ಭಾಗಕ್ಕೆ ದೊರಕಬೇಕಾದ ಹಕ್ಕನ್ನು ಮುಂಬೈ ಕರ್ನಾಟಕದವರು ಕಸಿದುಕೊಂಡಿದ್ದಾರೆ.
– ಡಾ.ರಜಾಕ್ ಉಸ್ತಾದ್ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ