ಆಲಂಗಳಿಗೆ ಹರಕೆ ತೀರಿಸಿದ ಭಕ್ತರು

>

ಮುದಗಲ್: ಮೊಹರಂ ಹಬ್ಬದ 9ನೇ ದಿನವಾದ ಗುರುವಾರ ಕಿಲ್ಲಾದಲ್ಲಿರುವ ಹಜರತ್ ಹಸನ್ ಆಲಂ ಹಾಗೂ ಮೇಗಳಪೇಟೆಯ ಹಜರತ್ ಹುಸೇನ್ ಆಲಂಗಳಿಗೆ ಭಕ್ತರು ಪೂಜೆ ಸಲ್ಲಿಸಿ ಹರಕೆ ತೀರಿಸಿದರು.

ದುಬೈ, ಮುಂಬೈ, ಹೈದರಾಬಾದ್, ಪುಣೆ, ಬೆಂಗಳೂರು ಸೇರಿ ದೂರದ ಊರುಗಳಿಂದ ಬಂದ ಹಿಂದು-ಮುಸ್ಲಿಂ ಭಕ್ತರು ಆಲಂ ದೇವರಿಗೆ ಕೆಂಪು ಸಕ್ಕರೆ, ಲೋಹದ ಕುದುರೆ, ದಟ್ಟಿ, ಹೂಮಾಲೆ, ಛತ್ರಿ ಸೇರಿ ಮುಂತಾದ ಕಾಣಿಕೆ ಸಲ್ಲಿಸಿ ಭಕ್ತಿ ಮೆರೆದರು. ಕೆಲವರು ಕಂದೂರಿ ಮಾಡಿದರೆ ಇನ್ನೂ ಕೆಲವರು ದೀಡ್ ನಮಸ್ಕಾರ, ಮಕ್ಕಳ ಜವಳ ಮಾಡಿಸಿ ಹರಕೆ ತೀರಿಸಿದರು.

ಕಿಲ್ಲಾದಲ್ಲಿರುವ ಹಜರತ್ ಹುಸೇನ್ ಪೀರ ದರ್ಗಾಕ್ಕೆ ಶಾಸಕ ಡಿ.ಎಸ್.ಹೂಲಗೇರಿ ಸೇರಿ ಅನೇಕ ಗಣ್ಯರು ಭೇಟಿ ನೀಡಿ ದೇವರ ದರ್ಶನ ಪಡೆದರು. ಮೊಹರಂ ನಿಮಿತ್ತ ಲಕ್ಷಾಂತರ ಭಕ್ತರು ಸೇರುವ ಕಿಲ್ಲಾದ ಹುಸೇನ್ ಆಲಂ ದರ್ಗಾದಲ್ಲಿ ಈ ಸಾರಿ ಪೊಲೀಸ್ ಇಲಾಖೆ ಮತ್ತು ದರ್ಗಾ ಕಮಿಟಿ ಸಿಸಿ ಕ್ಯಾಮರಾ ಅಳವಡಿಸಿ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಅಲ್ಲದೆ ದರ್ಗಾ, ಕೋಟೆಹೊಳಗಡೆ, ರಸ್ತೆಗಳಲ್ಲಿ ಈ ವರ್ಷ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.

ಮೊಹರಂ ಹಬ್ಬದ ಕೊನೆಯ (10ನೇ) ದಿನವಾದ ಸೆ.21ರಂದು ಹಜರತ್ ಹಸನ್-ಹುಸೇನ್ ಆಲಂಗಳ ದಫನ್ ಕಾರ್ಯಕ್ರಮ ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ಸೂರ್ಯಾಸ್ತದ ಮುಂಚೆ ನಡೆಯಲಿದೆ. ಈ ಕಾರ್ಯಕ್ರಮ ನೋಡಲು ಲಕ್ಷಾಂತರ ಜನಸ್ತೋಮ ಸೇರಲಿದೆೆ. ಅತ್ಯಂತ ವೈಭವ ಹಾಗೂ ಭಾವೈಕ್ಯದಿಂದ ಜರುಗುವ ಆಲಂಗಳ ಪರಸ್ಪರ ಭೇಟಿ ನೋಡುಗರ ಗಮನ ಸಳೆಯಲಿದೆ. ದಫನಾ ನಂತರ ಹೈದರಾಬಾದ್‌ನಿಂದ ತರಿಸಲಾದ ಸಿಡಿ ಮದ್ದುಗಳನ್ನು ಆಕಾಶದೆಡೆಗೆ ಸಿಡಿಸಲಾಗುತ್ತದೆ.