ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ

ರಾಯಚೂರು: ಮುನ್ನೂರು ಕಾಪು ಸಮುದಾಯ ಪ್ರತಿವರ್ಷ ಆಯೋಜಿಸುತ್ತಿರುವ ಮುಂಗಾರು ಸಾಂಸ್ಕೃತಿಕ ಹಬ್ಬ ಕೃಷಿಗೆ ಸ್ಫೂರ್ತಿದಾಯಕವಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಮುನ್ನೂರು ಕಾಪು ಸಮುದಾಯ, ಎಪಿಎಂಸಿ ರಾಯಚೂರು ಹಾಗೂ ಹಟ್ಟಿಚಿನ್ನದಗಣಿ ಸಂಯುಕ್ತಾಶ್ರಯದಲ್ಲಿ ಮೂರು ದಿನ ಹಮ್ಮಿಕೊಂಡಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಭಾನುವಾರ ಭಾರ ಎಳೆಯುವ ಜೋಡೆತ್ತುಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು. ನಮ್ಮ ಸಂಸ್ಕೃತಿಯಲ್ಲಿ ಕಾರ ಹುಣ್ಣಿಮೆಗೆ ಹೆಚ್ಚಿನ ಮಹತ್ವ ಇದೆ. ರೈತರ ಜತೆಗೆ ಒಡನಾಟ ಹೊಂದಿದ ಎತ್ತುಗಳನ್ನು ಪೂಜಿಸಿ ಕೃಷಿಗೆ ಅಣಿಯಾಗುವ ಶುಭ ಗಳಿಗೆಯಾಗಿದೆ. ಇಂಥ ಹಬ್ಬವನ್ನು ಮುನ್ನೂರು ಕಾಪು ಸಮುದಾಯ ಕಳೆದ 19 ವರ್ಷಗಳಿಂದ ವಿಶಿಷ್ಟವಾಗಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಗ್ರಾಮೀಣ ಭಾಗದ ಹಬ್ಬವನ್ನು ಉಳಿಸುವ ಕಾರ್ಯದಲ್ಲಿ ತೊಡಗಿರುವ ಕಾಪು ಸಮುದಾಯ ಕಾರ್ಯ ಶ್ಲಾಘನೀಯ ಎಂದರು.

ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ , ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿದರು. ಸೋಮವಾರ ಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಎ.ಪಾಪಾರೆಡ್ಡಿ, ನಾಫೇಡ್ ನಿರ್ದೇಶಕ ಜಯವಂತರಾವ್ ಪತಂಗೆ, ಸಮುದಾಯದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಇದ್ದರು.

Leave a Reply

Your email address will not be published. Required fields are marked *