ತಾಲೂಕು ಸಮ್ಮೇಳನದ ಪೂರ್ವಭಾವಿ ಸಭೆ
ರಾಯಚೂರು: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಂಡಿರುವ ಗೋಷ್ಠಿಗಳ ಮೂಲಕ ಸಮಾಜಕ್ಕೆ ಸಂದೇಶ ನೀಡುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮಾಡಬೇಕು ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್ ಸಲಹೆ ನೀಡಿದರು.
ನಗರದ ಪತ್ರಿಕಾಭವನದಲ್ಲಿ ನ.5ರಂದು ಹಮ್ಮಿಕೊಂಡಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿ, ಸಮ್ಮೇಳನ ಅದ್ದೂರಿಯಾಗಿರುವುದರ ಜತೆಗೆ ಅರ್ಥಪೂರ್ಣವಾಗಿರುವಂತೆ ಮಾಡಬೇಕು. ಈ ಹಿಂದೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದಲ್ಲಿ ಯಶಸ್ವಿಯಾಗಿ ನಡೆಸುವ ಮೂಲಕ ರಾಜ್ಯದ ಇತರ ಜಿಲ್ಲೆಗಳ ಜನರು ಮಾದರಿ ಸಮ್ಮೇಳನ ಎನ್ನುವಂತೆ ಮಾಡಿ ತೋರಿಸಿದ್ದೇವೆ. ತಾಲೂಕು ಸಮ್ಮೇಳನವೂ ಇತರ ತಾಲೂಕಿನವರಿಗೆ ಮಾದರಿಯಾಗಿರುವಂತೆ ಮಾಡಬೇಕು ಎಂದು ಹೇಳಿದರು.
ಈಗಾಗಲೇ ರಚನೆ ಮಾಡಲಾಗಿರುವ ವಿವಿಧ ಉಪ ಸಮಿತಿಗಳು ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಸಮ್ಮೇಳನದ ಯಶಸ್ವಿಗೆ ಶ್ರಮಿಸಬೇಕು. ಕನ್ನಡದ ತೇರು ಎಳೆಯುವ ಕೆಲಸಕ್ಕೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕೆಂದು ಡಾ.ಶಿವರಾಜ ಪಾಟೀಲ್ ತಿಳಿಸಿದರು.