ಲೋಕಸಭೆಗೆ ರಮೇಶ ನಿಂತರೆ ಬೆಂಬಲ

ಮಾಜಿ ಸಿಎಂ ಮೇಲೆ ಯಾವುದೇ ಸಿಟ್ಟಿಲ್ಲ>

ರಾಯಚೂರು: ರಮೇಶ ಜಾರಕಿಹೊಳಿ ಬೇಸರದಲ್ಲಿದ್ದಾರೆ. ಎಲ್ಲೋ ಹೊರಗೆ ಹೋಗಿದ್ದು, ನಾಲ್ಕು ದಿನಗಳಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ಲೋಕಸಭೆ ಚುನಾವಣೆಗೆ ನಿಲ್ಲುವುದಾದರೆ ನಿಲ್ಲಲಿ. ಅವರು ಇಷ್ಟಪಟ್ಟರೆ ನಾವು ಬೆಂಬಲಕ್ಕಿರುತ್ತೇವೆ. ಆದರೆ, ಅವರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬುದು ಸುಳ್ಳು. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಸಿಎಂ ಮೇಲೆ ನಮಗೆ ಯಾವುದೇ ಸಿಟ್ಟಿಲ್ಲ. ನಾವು ಚೆನ್ನಾಗೇ ಇದ್ದೇವೆ. ಸಮ್ಮಿಶ್ರ ಸರ್ಕಾರ ಭದ್ರವಾಗಿದೆ. ರಾಯಚೂರು ಸಂಸದ ಬಿ.ವಿ.ನಾಯಕರು ಬಿಜೆಪಿಗೆ ಹೋಗಲ್ಲ. ಮುಂಬರುವ ಲೋಕಸಭೆ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸುತ್ತಿದ್ದಾರೆ ಎಂದರು.

ಬಿಜೆಪಿ ನಾಯಕರು ಹತಾಷೆಯಲ್ಲಿದ್ದಾರೆ. ಹೀಗಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. 24 ಗಂಟೆಯಲಿ ಸರ್ಕಾರ ಬೀಳುತ್ತೆ ಎಂದು ಉಮೇಶ ಕತ್ತಿ ಹೇಳಿದ್ದರು. ಈಗ 15 ದಿನಕ್ಕೆ ಸರ್ಕಾರ ಬೀಳುತ್ತೆ ಎನ್ನುತ್ತಿದ್ದಾರೆ. ಸರ್ಕಾರ ಬಹಳ ದಿನ ಇರುವುದಿಲ್ಲ ಎಂದು ಬಸವರಾಜ ಹೊರಟ್ಟಿ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಸತೀಶ ಜಾರಕಿಹೊಳಿ ಹೇಳಿದರು.

ನಾನು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಪಕ್ಷ ಇದ್ದರೆ ನಾವು, ನಾವಿದ್ರೆ ಪಕ್ಷ. ಯಡಿಯೂರಪ್ಪರನ್ನು ನಾನು ಭೇಟಿಯಾಗಿಲ್ಲ. ನಾನು ಬಿಜೆಪಿ ಸೇರುತ್ತೇನೆಂಬ ಊಹಾಪೋಹಗಳನ್ನು ಹರಡುವ ಮೂಲಕ ಗೊಂದಲ ಮೂಡಿಸಲಾಗುತ್ತಿದೆ.
| ಬಿ.ವಿ.ನಾಯಕ, ಸಂಸದ, ರಾಯಚೂರು

ಜಾರಕಿಹೊಳಿ ಸಹೋದರರೊಂದಿಗೆ ನಾನು ಮೊದಲಿನಿಂದಲೂ ಅನ್ಯೋನ್ಯವಾಗಿದ್ದೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಪಕ್ಷದ ಮೂವರು ಶಾಸಕರಿದ್ದರೂ ಸಚಿವ ಸ್ಥಾನ ನೀಡದೆ ಕಡೆಗಣಿಸಲಾಗಿದೆ. ಈ ಬಗ್ಗೆ ಅಸಮಾಧಾನ ಇದ್ದರೂ ಪಕ್ಷ ತೊರೆಯುವುದಿಲ್ಲ.
| ಪ್ರತಾಪಗೌಡ ಪಾಟೀಲ್, ಶಾಸಕ, ಮಸ್ಕಿ