ನನಗೂ ಆಮಿಷ ಒಡ್ಡಲಾಗಿತ್ತು ಎಂದ ಸಚಿವ ಪುಟ್ಟರಂಗಶೆಟ್ಟಿ

ರಾಯಚೂರು: ಹಲವು ಶಾಸಕರಿಗೆ ಆಮಿಷ ಒಡ್ಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನನಗೂ ಚುನಾವಣೆ ಮುನ್ನ ಬಿಜೆಪಿ ಸೇರಿದರೆ ಸಚಿವಸ್ಥಾನದ ಆಮಿಷ ಒಡ್ಡಲಾಗಿತ್ತು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸೇರುವಂತೆ ಸಿಪಿ ಯೋಗಿಶ್ವರ ನನಗೆ ಒತ್ತಾಯಿಸಿದ್ದರು. ನಾನು ಖಡಾಖಂಡಿತ ನಿರಾಕರಿಸಿದ್ದರಿಂದ ಈಗ ನನ್ನನ್ನು ಬಿಜೆಪಿಯವರು ಸಂಪರ್ಕಿಸುತ್ತಿಲ್ಲ. ಬಿಜೆಪಿಯಿಂದ ನಮಗೇನೂ ಭಯವಿಲ್ಲ. ನಾವೆಲ್ಲ ಒಗ್ಗಟ್ಟಿದ್ದೇವೆ. ಸರ್ಕಾರ ಸುಭದ್ರವಾಗಿದ್ದು, ಅತಂತ್ರಗೊಳಿಸುವ ಕೆಲಸವನ್ನು ಬಿಜೆಪಿ ನಾಯಕರು ಬಿಡಬೇಕು. ಜಾರಕಿಹೊಳಿ ಸಹೋದರರು ಪಕ್ಷ ಬಿಟ್ಟು ಹೋಗುವುದಿಲ್ಲ. ಗೊಂದಲ ಸೃಷ್ಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂಬುದು ಸರಿಯಲ್ಲ ಎಂದರು.

ಮೈಸೂರು ದಸರಾ ಆಚರಣೆ ಸಮಿತಿಯಲ್ಲಿ ಹೆಸರಿಲ್ಲದ್ದಕ್ಕೆ ಬೇಸರವಿತ್ತು. ಆದರೆ, ಅದು ಪರಿಹಾರವಾಗಿದೆ. ಮೊದಲಿಂದಲೂ ಚಾಮರಾಜನಗರ ಜಿಲ್ಲಾ ಉಸ್ತುವಾರಿಗಳಿಗೆ ಸಮಿತಿ ಉಪಾಧ್ಯಕ್ಷ ಸ್ಥಾನ ನೀಡುತ್ತಾ ಬರಲಾಗುತ್ತಿದ್ದು, ಗೊಂದಲ ನಿವಾರಿಸಲಾಗಿದೆ. ಖಾಸಗಿ ಕಟ್ಟಡಗಳಲ್ಲಿರುವ ವಸತಿ ನಿಲಯಗಳಿಗೆ ಸರ್ಕಾರ ವಾರ್ಷಿಕ 47 ಕೋಟಿ ರೂ. ಬಾಡಿಗೆ ನೀಡುತ್ತಿದೆ. ಸ್ಥಳದ ಕೊರತೆಯಿಂದ ಕಟ್ಟಡ ನಿರ್ಮಾಣಕ್ಕೆ ಸಮಸ್ಯೆಯಾಗಿದೆ. ಸ್ಥಳ ದೊರೆತಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ನಬಾರ್ಡ ಯೋಜನೆಯಡಿ 58 ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ. ಹಿಂದೆ ನಿರ್ಮಾಣ ಆರಂಭಿಸಿದ್ದ 200 ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ತಿಂಗಳಲ್ಲಿ ಎಂಟು ಕಟ್ಟಡಗಳ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.

ಈ ಸಂದರ್ಭ ಸಂಸದ ಬಿ.ವಿ.ನಾಯಕ, ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ಎನ್.ಎಸ್.ಬೋಸರಾಜು ಉಪಸ್ಥಿತರಿದ್ದರು.