ಕನಿಷ್ಠ ವೇತನ ಜಾರಿಗೆ ಕ್ರಮಕೈಗೊಳ್ಳಿ

ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ | ಕಾರ್ಮಿಕ ಸಂಘದ ನೋಂದಣಿ ಶುಲ್ಕ ಹೆಚ್ಚಳಕ್ಕೆ ಖಂಡನೆ

ರಾಯಚೂರು: ಕೋರ್ಟ್ ಆದೇಶದಂತೆ ಕನಿಷ್ಠ ವೇತನ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಮಂಗಳವಾರ ಸಾರ್ವಜನಿಕ ಉದ್ಯಾನದಿಂದ ಕಾರ್ಮಿಕ ಇಲಾಖೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಾರ್ಮಿಕ ಇಲಾಖೆ ಪ್ರಭಾರ ಅಧಿಕಾರಿ ವೆಂಕಟಸ್ವಾಮಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ರಾಜ್ಯ ಉಚ್ಚ ನ್ಯಾಯಾಲಯ 37 ವಿವಿಧ ಶೆಡ್ಯೂಲ್ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ನಿಗದಿಗೊಳಿಸಿರುವ ಕನಿಷ್ಠ ವೇತನದ ಅಧಿಸೂಚನೆ ಎತ್ತಿ ಹಿಡಿದು ಎಂಟು ವಾರದೊಳಗೆ ಸಂದಾಯ ಮಾಡುವಂತೆ ಆದೇಶಿಸಿದರೂ ಪಾಲನೆಯಾಗುತ್ತಿಲ್ಲ. ಕೆಲ ಆಡಳಿತ ಮಂಡಳಿ, ಮಾಲೀಕರು ಕಡಿಮೆ ವೇತನ ನೀಡುತ್ತಿದ್ದಾರೆ. ಆದ್ದರಿಂದ ನ್ಯಾಯಾಲಯದ ಆದೇಶದಂತೆ ಕನಿಷ್ಠ ಕೂಲಿ ಜಾರಿಗೆ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನು ಸ್ಕೀಮ್ ನೌಕರರು ಎಂದು ಪರಿಗಣಿಸಿದ್ದು, ಇವರನ್ನೂ ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕು. ತಂದೆ, ತಾಯಿ ಒಳಗೊಂಡು 5 ಘಟಕಗಳ ಆಧಾರದಲ್ಲಿ ಕನಿಷ್ಠ ವೇತನ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು. ಪ್ರಭಾರ ಅಧಿಕಾರಿ ವೆಂಕಟಸ್ವಾಮಿ ಮಾತನಾಡಿ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಶೀಲನೆ ನಡೆಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ಸಿಐಟಿಯು ಅಧ್ಯಕ್ಷೆ ಎಚ್.ಪದ್ಮಾ, ಜಿ.ಕಾರ್ಯದರ್ಶಿ ಶೇಕ್ಷಾಖಾದ್ರಿ, ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ, ಸರಸ್ವತಿ ಇತರರಿದ್ದರು.

Leave a Reply

Your email address will not be published. Required fields are marked *