ರಾಯರ ದರ್ಶನಕ್ಕೆ ಮಳೆಯ ಅಡ್ಡಿ ಇಲ್ಲ, ಭಕ್ತರಿಗೆ ಆತಂಕ ಬೇಡ ಎಂದ ಮಂತ್ರಾಲಯ ಶ್ರೀಮಠ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಆವರಣಕ್ಕೆ ನೀರು ನುಗ್ಗಿದೆ ಎನ್ನುವ ವದಂತಿ ಹರಡಿಸಲಾಗುತ್ತಿದ್ದು, ಭಕ್ತರು ಇದಕ್ಕೆ ಕಿವಿಗೊಡಬಾರದು ಎಂದು ಶ್ರೀಮಠ ತಿಳಿಸಿದೆ.

ಕಳೆದ ಎರಡು ದಿನಗಳಿಂದ ದೇವಸ್ಥಾನವೊಂದಕ್ಕೆ ನೀರು ನುಗ್ಗಿದ ಚಿತ್ರಗಳನ್ನು ವಾಟ್ಸ್​ಆ್ಯಪ್​ಗೆ ಹರಿಯಬಿಡುತ್ತಿದ್ದು, ರಾಯರ ಮಠಕ್ಕೆ ನೀರು ನುಗ್ಗಿದೆ. ರಾಯರ ದರ್ಶನ ಸಾಧ್ಯವಿಲ್ಲವೆಂಬ ಸಂದೇಶ ಹರಿಬಿಡಲಾಗಿದೆ. ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ನೀರು ನದಿಗೆ ಹರಿದು ಬಿಟ್ಟಿರುವುದರಿಂದ ನದಿಯಲ್ಲಿ ಹೆಚ್ಚಿನ ನೀರಿನ ಹರಿವಿದೆ. ಆದರೆ, ನೀರು ಶ್ರೀಮಠಕ್ಕೆ ನುಗ್ಗಿಲ್ಲ. ಜತೆಗೆ ಪ್ರಸ್ತುತ ಸ್ಥಿತಿಯಲ್ಲಿ ಶ್ರೀಮಠಕ್ಕೆ ನೀರು ನುಗ್ಗುವ ಆತಂಕದ ಪರಿಸ್ಥಿತಿಯೂ ಇಲ್ಲ ಎಂದು ತಿಳಿಸಿದೆ.

ಆ.25 ರಿಂದ 31ರ ವರೆಗೆ ನಡೆಯಲಿರುವ ಆರಾಧನೆ ಮಹೋತ್ಸವಕ್ಕೆ ಆಗಮಿಸುವ ಭಕ್ತರು ಪ್ರವಾಹ ಭೀತಿ ವದಂತಿಗೆ ಕಿವಿಗೊಡದೆ ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆಯಬಹುದಾಗಿದೆ ಎಂದು ಶ್ರೀಮಠದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.