ರಾಯರ ದರ್ಶನಕ್ಕಿಲ್ಲ ಗ್ರಹಣದ ಕರಿನೆರಳು

ರಾಯಚೂರು: ಗ್ರಹಣ ಸಂದರ್ಭ ರಾಜ್ಯದ ಪ್ರಸಿದ್ಧ ದೇವಸ್ಥಾನ, ಮಠಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಸಿಗದಿದ್ದರೂ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶುಕ್ರವಾರ ಜರುಗಲಿರುವ ಚಂದ್ರಗ್ರಹಣ ಸಮಯದಲ್ಲಿ ರಾಯರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ.

ಶ್ರೀಮಠದಲ್ಲಿ ಹಿಂದಿನಂತೆ ಮಧ್ಯಾಹ್ನ 2 ರಿಂದ 4ರವರೆಗೆ ಮಾತ್ರ ರಾಯರ ದರ್ಶನಕ್ಕೆ ಭಕ್ತರಿಗೆ ಅವಕಾಶವಿಲ್ಲ. ಅದರ ಹೊರತು ಪಡಿಸಿ ರಾಯರ ದರ್ಶನಕ್ಕೆ ಗ್ರಹಣದ ಸಂಬಂಧ ಯಾವುದೇ ಸಮಯದ ಬದಲಾವಣೆ ಮಾಡಲಾಗಿಲ್ಲ. ಜತೆಗೆ ರಾತ್ರಿ ಗ್ರಹಣ ನಡೆದಿರುವ ಸಂದರ್ಭದಲ್ಲೂ ರಾಯರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ. ಗ್ರಹಣ ನಿಮಿತ್ತ ಶ್ರೀಮಠದಲ್ಲಿ ವಿಶೇಷ ಹೋಮ, ಹವನಗಳನ್ನು ಹಮ್ಮಿಕೊಳ್ಳಲಾಗಿದ್ದು, ಗ್ರಹಣ ಸಂದರ್ಭ ಮಾತ್ರ ಹಲವು ಪೂಜೆಗಳನ್ನು ರದ್ದುಗೊಳಿಸಲಾಗಿದ್ದು, ಗ್ರಹಣ ಅವಧಿ ನಂತರ ಮೂಲ ಬೃಂದಾವನಕ್ಕೆ ನೈರ್ಮಲ್ಯ ವಿಸರ್ಜನೆ ಹಾಗೂ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.