ರಾಯಚೂರು: ಮಂಡ್ಯದಲ್ಲಿ ಡಿ.20ರಿಂದ ಮೂರು ದಿನಗಳವರೆಗೆ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡನಾಡು ಕನ್ನಡಿಗರ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸಲು ಐದು ನಿಮಿಷ ಮಾತನಾಡಲು ಸಮಯ ನೀಡಲು ಮನವಿ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ದೊರೆತ್ತಿಲ್ಲ ಎಂದು ಗಡಿನಾಡು ಕನ್ನಡಿಗರ ಸಂಘದ ಉಪಾಧ್ಯಕ್ಷ ಅಮರದೀಕ್ಷಿತ್ ಹೇಳಿದರು.
ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಕೃಷ್ಣಾ ಮಂಡಲದ ಜಿಲ್ಲಾ ಪರಿಷತ್ ಉನ್ನತ ಕನ್ನಡ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸೋಮವಾರ ಮಾತನಾಡಿ, ಹೊರರಾಜ್ಯದ ಮೆದಕ್, ಹೈದರಾಬಾದ್, ನಾರಾಯಣಪೇಟ್, ಕರ್ನೂಲ್, ಅನಂತಪುರ ಜಿಲ್ಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ 24 ಸಾವಿರ ಮಕ್ಕಳು ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ದಿನದಂದು ಕಪ್ಪುಪಟ್ಟಿ ಪ್ರದರ್ಶನ, ಸಮ್ಮೇಳನದ ವಿರುದ್ಧ ಘೋಷಣೆಗಳು ಹಾಕಬೇಕೆಂದು ಎಂದು ಕರೆ ನೀಡಿದರು.
ಗಡಿನಾಡಿನಲ್ಲಿ ಸಾವಿರಾರು ಮಕ್ಕಳು ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಓದಿ ಮುಂದಿನ ವಿದ್ಯಾಭ್ಯಾಸಕ್ಕೆ ಕರ್ನಾಟಕಕ್ಕೆ ಹೋದಾಗ ಪ್ರವೇಶಾತಿ ನಿಡಲಾಗುತ್ತಿಲ್ಲ. ಗಡಿನಾಡ ಕನ್ನಡ ಮಕ್ಕಳಿಗೆ ವಸತಿ ನಿಲಯಗಳಲ್ಲಿ ಪ್ರವೇಶ ಪಡೆಯಲೂ ಕೂಡ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದರು.
ಕಾಸರಗೂಡು, ಜತ್ತು, ಸೋಲಾಪುರ, ಅಕ್ಕಲಕೋಟ ಸೇರಿದಂತೆ ಅನೇಕ ಪ್ರದೇಶಗಳನ್ನು ಗಡಿನಾಡು ಕನ್ನಡ ಪ್ರಾಂತ ಎಂದು ಘೋಷಿಸಲಾಗಿದೆ. ಅದರಂತೆ ಕರ್ನಾಟಕ ತೆಲಂಗಾಣ ಗಡಿ ಗ್ರಾಮಗಳನ್ನು ಗಡಿನಾಡು ಕನ್ನಡ ಗ್ರಾಮಗಳೆಂದು ಕರ್ನಾಟಕ ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಮಂಡಲದ ಮಾಜಿ ಅಧ್ಯಕ್ಷ ಪಿ.ಕೆ.ಕೃಷ್ಟಪ್ಪ, ಶಾಲೆಯ ಮುಖ್ಯಗುರು ನಿಜಾಮುದ್ದಿನ್, ಶಿಕ್ಷಕರಾದ ನಾಗಭೂಷಣ, ರೇಣುಕಾ, ನಾಗರಾಜ ಸೇರಿದಂತೆ ಇತರರಿದ್ದರು.