ರಾಯಚೂರು: ಮಹಾಸಭೆಯ ಬೈಲಾ ನಿಯಮಗಳನ್ನು ಉಲ್ಲಂಘಿಸಿರುವ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ನಾಗಲಿಂಗಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮಂಚಾಲ್‌ರನ್ನು ಹುದ್ದೆಗಳಿಂದ ಪದಚ್ಯುತಿಗೊಳಿಸಲಾಗಿದೆ ಎಂದು ಮಹಾಸಭಾ ರಾಜ್ಯ ನಿರ್ದೇಶಕ ಎಂ.ವಸಂತ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕೆ.ನಾಗಲಿಂಗಸ್ವಾಮಿ, ಲಿಂಗಸುಗೂರು ಕ್ಷೇತ್ರ ನೀಡುವಂತೆ ರಾಜಕೀಯ ಪಕ್ಷಗಳಿಗೆ ಒತ್ತಾಯ ಮಾಡುವುದು ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ತಮಗೆ ಟಿಕೆಟ್ ಪಕ್ಕಾ ಎನ್ನುವಂತಹ ಸಂದೇಶಗಳನ್ನು ಹಾಕುವ ಮೂಲಕ ಮಹಾಸಭಾ ಹೆಸರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಹಾಗೂ ಪದಾಧಿಕಾರಿಗಳ ಪಟ್ಟಿಗೆ ಅನುಮೋದನೆ ನೀಡುವಾಗ 2022 ಡಿಸೆಂಬರ್ ಒಳಗೆ ಸಾವಿರ ಸದಸ್ಯತ್ವ ಮಾಡುವಂತೆ ಷರತ್ತು ವಿಧಿಸಲಾಗಿತ್ತು. ಆದರೆ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸದಸ್ಯತ್ವ ಪೂರ್ಣಗೊಳಿಸಿಲ್ಲ. ರಾಜ್ಯ ಸಮಿತಿ, ಪ್ರಭಾರ ನಿರ್ದೇಶಕರಿಗೆ ಮಾಹಿತಿ ನೀಡದೆ, ಅನುಮೋದನೆ ಪಡೆಯದೆ ತಾಲೂಕು, ಹೋಬಳಿ ಸಮಿತಿಗೆ ನೇಮಕ ಮಾಡಿದ್ದಾರೆ. ರಾಜ ನಿರ್ದೇಶಕರು ಕರೆದ ಸಭೆಗೆ ಪದಾಧಿಕಾರಿಗಳು ಭಾಗವಹಿಸದಂತೆ ಸಂದೇಶ ಕಳುಹಿಸಿದ್ದಾರೆ. ಪದಾಧಿಕಾರಿಗಳ ಸಭೆ ಕರೆಯದೇ ಲಿಂಗಸುಗೂರಿನಲ್ಲಿ ಜಿಲ್ಲಾ ಛಲವಾದಿ ಸಮಾವೇಶ ನಡೆಸುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಾಕಿದ್ದಾರೆ ಎಂ. ವಸಂತ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಪದಾಧಿಕಾರಿಗಳಾದ ಬಿ.ಎ.ದೊಡ್ಡಮನಿ, ಬಸವರಾಜ ಗಟ್ಟು, ವಿಜಯಪ್ರಸಾದ, ಚನ್ನರಾಯುಡು ಉಪಸ್ಥಿತರಿದ್ದರು.