ರಾಯಚೂರಿನಲ್ಲಿ ನಾಮಪತ್ರ ಸ್ವೀಕಾರ ನಾಳೆಯಿಂದ ಆರಂಭ – ಜಿಲ್ಲಾಧಿಕಾರಿ ಬಿ.ಶರತ್ ಹೇಳಿಕೆ

ರಾಯಚೂರು: ರಾಜ್ಯದಲ್ಲಿ ನಡೆಯಲಿರುವ ಎರಡನೇ ಹಂತದ ಲೋಕಸಭೆ ಚುನಾವಣೆಗೆ ಮಾ.28ರಿಂದ ನಾಮಪತ್ರ ಸ್ವೀಕಾರ ಆರಂಭವಾಗಲಿದ್ದು, ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸ್ವೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದರು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ನಾಮಪತ್ರ ಸ್ವೀಕಾರ ಸಂದರ್ಭ 100 ಮೀಟರ್ ಒಳಗೆ ಕೇವಲ 3 ವಾಹನಗಳಿಗೆ ಮಾತ್ರ ಬರಲು ಅವಕಾಶವಿದೆ. ನಾಮಪತ್ರ ಸ್ವೀಕಾರ ಸಂದರ್ಭದಲ್ಲಿ ಅಭ್ಯರ್ಥಿ ಸೇರಿ 5 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದರು.

ಬಿಸಿಲು ಹೆಚ್ಚಿರುವ ಕಾರಣ ಮತಗಟ್ಟೆಯಲ್ಲಿ ಕುಡಿವ ನೀರು, ನೆರಳು ಮತ್ತು ಆಸನಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಸಖಿ ಮತಗಟ್ಟೆಗಳನ್ನು ಮುಂದುವರಿಸಲಾಗುತ್ತಿದೆ. ಮತ ಕೇಂದ್ರಗಳಿಗೆ ಗುಲಾಬಿ ಬಣ್ಣ ಹಾಕುವುದಿಲ್ಲ. ಮತದಾನದ ಅವಧಿ ಪೂರ್ಣಗೊಂಡ ನಂತರದಲ್ಲಿಯೂ ಜನರು ಸಾಲುಗಟ್ಟಿ ನಿಂತಿದ್ದರೆ ಅವರಿಗೆ ಮತದಾನಕ್ಕೆ ಅವಕಾಶ ನೀಡಲಾಗುವುದು.

ಸರ್ಕಾರ ಬೇಸಿಗೆ ಕಾರಣಕ್ಕೆ ಕಚೇರಿ ಅವಧಿಯನ್ನು ಏ.1ರಿಂದ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದು, ಇದರಿಂದ ಚುನಾವಣೆ ಕಾರ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ. ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ನಿಗದಿಯಂತೆ ಕಾರ್ಯನಿರ್ವಹಿಸಲಿದ್ದಾರೆ.

ಇದುವರೆಗೂ ದಾಖಲೆಯಿಲ್ಲದ 6.10 ಲಕ್ಷ ರೂ. ವಶಪಡಿಸಿಕೊಂಡಿದ್ದು, 69.47 ಲಕ್ಷ ರೂ. ಮೌಲ್ಯದ ಗ್ಯಾಸ್ ಸಿಲಿಂಡರ್, ಸ್ಟೌ , ಕಾರ್, ಐದು ಟಿಪ್ಪರ್, 3 ಟ್ಯಾಕ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯಿಂದ 6.96 ಲಕ್ಷ ರೂ. ಮೌಲ್ಯದ 1,888 ಲೀಟರ್ ಮದ್ಯ, ಪೊಲೀಸ್ ಇಲಾಖೆಯಿಂದ 62,649 ರೂ. ಮೌಲ್ಯದ 553 ಲೀಟರ್ ಮದ್ಯವನ್ನು ಜಫ್ತಿ ಮಾಡಲಾಗಿದೆ ಎಂದು ಬಿ.ಶರತ್ ತಿಳಿಸಿದರು. ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಜಗದೀಶ ನಾಯಕ, ಜಿಪಂ ಉಪ ಕಾರ್ಯದರ್ಶಿ ಮಹ್ಮದ್ ಯೂಸೂಫ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂದೀಪ್ ಉಪಸ್ಥಿತರಿದ್ದರು.