ಕೈಕೊಟ್ಟ ಕ್ಷೇತ್ರಗಳತ್ತ ಹಸ್ತ ಹುರಿಯಾಳು ಚಿತ್ತ

ಯಾದಗಿರಿ ಜಿಲ್ಲೆಯಲ್ಲಿ ಬಿ.ವಿ.ನಾಯಕ ಭರ್ಜರಿ ಪ್ರಚಾರ |ಮಾನ್ವಿ, ದೇವದುರ್ಗ, ಸುರಪುರ, ಶಹಾಪುರದತ್ತ ಗಮನ

ಶಿವಮೂರ್ತಿ ಹಿರೇಮಠ ರಾಯಚೂರು
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ ಕೊಟ್ಟಿದ್ದ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಭರ್ಜರಿ ಪ್ರಚಾರ ಕೈಗೊಳ್ಳುವ ಮೂಲಕ ಹೆಚ್ಚಿನ ಮತ ಪಡೆಯಲು ಗಮನ ಹರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇವಲ 1,499 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ ವಿರುದ್ಧ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ನ ಹಾಲಿ ಅಭ್ಯರ್ಥಿ ಬಿ.ವಿ.ನಾಯಕ 4 ವಿಧಾನಸಭೆ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದು, ಉಳಿದ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರು.

ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯುಂ ಟಾಗಿದ್ದು, ಯಾದಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಮುನ್ನಡೆ ಕೊಟ್ಟಿತ್ತು. ಕಾಂಗ್ರೆಸ್ ಶಾಸಕರಿದ್ದ ಸುರಪುರದಲ್ಲಿ ಅಂದು ಕೈಗೆ ಹಿನ್ನಡೆಯುಂಟಾಗಿತ್ತು. ಪ್ರಸ್ತುತ ಶಹಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿರುವುದರಿಂದ ಅಧಿಕ ಮತ ಗಳಿಕೆಗೆ ಶತಪ್ರಯತ್ನ ನಡೆಯುತ್ತಿದೆ. ಜಿಲ್ಲೆಯ ರಾಯಚೂರು ಗ್ರಾಮೀಣ, ರಾಯಚೂರು ನಗರ ಮತ್ತು ಲಿಂಗಸುಗೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ದೊರೆತಿದ್ದು, ಮಾನ್ವಿ, ದೇವದುರ್ಗ ಕ್ಷೇತ್ರಗಳಲ್ಲಿ ಹಿನ್ನಡೆ ಯುಂಟಾಗಿತ್ತು. ಅದರಲ್ಲೂ ಬಿ.ವಿ.ನಾಯಕ ತಂದೆ ಎ.ವೆಂಕಟೇಶ ನಾಯಕ ಶಾಸಕರಾಗಿದ್ದ ವೇಳೆ ದೇವದುರ್ಗ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದರು. ಹೀಗಾಗಿ, ಕಳೆದ ಬಾರಿ ಹಿನ್ನಡೆ ಅನುಭವಿಸಿದ್ದ ಕ್ಷೇತ್ರಗಳ ಜತೆಗೆ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳತ್ತ ಹೆಚ್ಚಿನ ಗಮನ ಹರಿಸಿರುವ ಪಕ್ಷ ಪ್ರಚಾರ ಕಾರ್ಯ ಚುರುಕುಗೊಳಿಸಿದೆ ಮತ್ತು ಆಯಾ ಕ್ಷೇತ್ರಗಳ ಜೆಡಿಎಸ್ ನಾಯಕರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಕಳೆದ ಬಾರಿ ಮುನ್ನಡೆ ನೀಡಿದ್ದ ಲಿಂಗಸುಗೂರು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದರೂ ಕಾಂಗ್ರೆಸ್‌ಗೆ 10 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ದೊರೆತಿತ್ತು. ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಶಾಸಕರಿದ್ದಾರೆ. ಜತೆಗೆ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಲಿಂಗಸುಗೂರು ತಾಲೂಕಿನವರಾಗಿರುವ ಕಾರಣ ಆ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮಾನ್ವಿ ಕ್ಷೇತ್ರದಲ್ಲಿ ಹೆಚ್ಚಿನ ಓಡಾಟ ನಡೆಸುತ್ತಿರುವ ಬಿ.ವಿ.ನಾಯಕಗೆ ಆ ಕ್ಷೇತ್ರದ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಆಸರೆಯಾಗುವರೆ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಬಿಜೆಪಿ ಶಾಸಕರಿದ್ದರೂ ಮುನ್ನಡೆ ನೀಡಿದ್ದ ರಾಯಚೂರು ಗ್ರಾಮಾಂತರದಲ್ಲಿ ಪ್ರಸ್ತುತ ಕಾಂಗ್ರೆಸ್ ಶಾಸಕರಿರುವ ಕಾರಣ ಹೆಚ್ಚಿನ ಮತಗಳಿಕೆಗೆ ಪ್ರಯತ್ನ ನಡೆಸಲಾಗುತ್ತಿದೆ.

ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಬಲಾಬಲ
ಕಳೆದ ಚುನಾವಣೆಯಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದ ಒಟ್ಟು 8 ವಿಧಾನಸಭೆ ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್, ತಲಾ 2 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿದ್ದರು. ಪ್ರಸ್ತುತ 8 ಕ್ಷೇತ್ರದಲ್ಲಿ 4 ಕ್ಷೇತ್ರಗಳಲ್ಲಿ ಬಿಜೆಪಿ, 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಕಾಂಗ್ರೆಸ್‌ನ ಸಂಖ್ಯಾಬಲ ಹೆಚ್ಚಾಗದಿದ್ದರೂ ಬಿಜೆಪಿ ಸಂಖ್ಯಾಬಲ ಹೆಚ್ಚಳವಾಗಿದೆ. ಜತೆಗೆ ಕಳೆದ ಚುನಾವಣೆಯಲ್ಲಿ ಕೈ, ಬಿಜೆಪಿ ಅಭ್ಯರ್ಥಿಯಾಗಿ ದೇವದುರ್ಗ ವಿಧಾನಸಭೆ ಕ್ಷೇತ್ರದವರೆ ಸ್ಪರ್ಧಿಸಿದ್ದು, ಈ ಬಾರಿ ದೇವದುರ್ಗ ಮತ್ತು ಲಿಂಗಸುಗೂರು ತಾಲೂಕಿನವರ ನಡುವೆ ಹಣಾಹಣಿ ನಡೆಯುತ್ತಿದೆ.