ಚಿನ್ನದ ನಾಡಿನ ಅಖಾಡಕ್ಕೆ ವೆಂಕಟೇಶ ಪ್ರಸಾದ ಸಂಭವ ?

ರಾಯಚೂರು: ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಆಯ್ಕೆಯ ಕಗ್ಗಂಟು ಮುಂದುವರಿದಿದ್ದು, ಕೊನೆಗಳಿಗೆಯಲ್ಲಿ ಬಳ್ಳಾರಿ ಮೂಲದವರನ್ನು ಅಭ್ಯರ್ಥಿ ಮಾಡುವ ಸಂಭವ ಹೆಚ್ಚಾಗಿ ಕಂಡು ಬರುತ್ತಿದೆ. 2009ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅಮ ರೇಶ್ವರ ನಾಯಕರ ಹೆಸರು ಅಂತಿಮಗೊಂಡು, ಬಿ ಫಾರಂ ನೀಡಿದ ನಂತರವೂ ಶ್ರೀರಾಮುಲು ಸಂಬಂಧಿ ಬಳ್ಳಾರಿಯ ಸಣ್ಣ ಪಕ್ಕೀರಪ್ಪ ಅಂತಿಮವಾಗಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಸಂಸದರಾಗಿದ್ದರು. ಈಗ ಮತ್ತೊಮ್ಮ ಬಳ್ಳಾರಿಯವರೇ ಬಿಜೆಪಿ ಅಭ್ಯರ್ಥಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಬಾರಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಮತ್ತು ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ ನಡುವೆ ಬಿಜೆಪಿ ಟಿಕೆಟ್‌ಗಾಗಿ ಅಂತಿಮ ಹಣಾಹಣಿ ನಡೆದಿತ್ತು. ಅಭ್ಯರ್ಥಿ ಆಯ್ಕೆಗೆ ಎದುರಾಗಿರುವ ಕಗ್ಗಂಟಿನಿಂದಾಗಿ ಪಕ್ಷದ ವರಿಷ್ಠರು ಬಿಡುಗಡೆ ಮಾಡಿದ ಎರಡು ಪಟ್ಟಿಯಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯನ್ನು ತಡೆಹಿಡಿಯಲಾಗಿತ್ತು.

ಮೊದಲಿನಿಂದಲೂ ತಿಪ್ಪರಾಜು ಹವಾಲ್ದಾರ್‌ಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು ಎಂದು ಪಟ್ಟು ಹಿಡಿದಿರುವ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ, ಕೊನೆಯ ಗಳಿಗೆಯಲ್ಲಿ ವರಿಷ್ಠರ ಮುಂದೆ ತಮಗೇ ಬಿ ಫಾರಂ ನೀಡುವಂತೆ ಒತ್ತಡ ಹೇರುತ್ತಿರುವುದರಿಂದ ವರಿಷ್ಠರು ಮತ್ತಷ್ಟು ಗೊಂದಲಕ್ಕೆ ಬೀಳುವಂತೆ ಮಾಡಿದೆ. 2009ರಲ್ಲಿ ಬಿ ಫಾರಂ ಧಾರೆ ಎರೆದಂತೆ ಮತ್ತೊಮ್ಮೆ ಕೈಕೊಟ್ಟರೆ ಹೇಗೆ ಎಂದು ಅಮರೇಶ್ವರ ನಾಯಕರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲು ಬಿಜೆಪಿ ವರಿಷ್ಠರು ಮೀನಾಮೇಷ ಎಣಿಸುತ್ತಿದ್ದಾರೆ.

ಮತ್ತೊಂದೆಡೆ ತಿಪ್ಪರಾಜು ಹವಾಲ್ದಾರ್‌ಗೆ ಶಿವನಗೌಡ ನಾಯಕ ಅಡ್ಡಗಾಲು ಎನ್ನಲಾಗಿದ್ದು, ಪರ್ಯಾಯ ಅಭ್ಯರ್ಥಿ ಬಗ್ಗೆ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಳ್ಳಾರಿ ಲೋಕಸಭೆಗೆ ಅಭ್ಯರ್ಥಿ ಆಯ್ಕೆ ಆಖೈರು ಮಾಡುವ ಕೆಲ ದಿನಗಳ ಮುನ್ನ ಕೂಡ್ಲಿಗಿ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ ಪ್ರಸಾದ ಟಿಕೆಟ್ ಸಿಗುವ ನಂಬಿಕೆಯಿಂದ ಬಿಜೆಪಿ ಸೇರ್ಪಡೆ ಆಗಿದ್ದರು. ಆದರೆ, ವರಿಷ್ಠರು ಜಾರಕಿಹೊಳೆ ಸಂಬಂಧಿ ದೇವೇಂದ್ರಪ್ಪರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರು. ಈ ವಿಷಯದಲ್ಲಿ ಶಾಸಕ ಶ್ರೀರಾಮುಲುರ ಒತ್ತಾಸೆಯೂ ಇತ್ತು ಎಂಬುದು ಬಹಿರಂಗ ವಿಷಯ. ಇದರಿಂದ ಅಸಮಾಧಾನಿತ ವೆಂಕಟೇಶ್ ಪ್ರಸಾದ್‌ಗೆ ಪರಿಹಾರ ಮಾರ್ಗವಾಗಿ ರಾಯಚೂರಿಗೆ ಕರೆತರುವ ಚಿಂತನೆ ನಡೆದಿದೆ. ಶಾಸಕ ನಾಗೇಂದ್ರಗೂ ಆ ಮೂಲಕ ಬಲೆಬೀಸಬಹುದಾಗಿದ್ದು, ಎರಡೂ ಕ್ಷೇತ್ರಗಳ ಹೊಣೆ ಶ್ರೀರಾಮುಲು ಹೆಗಲಿಗೆ ಹೊರಿಸಲು ಉನ್ನತಮಟ್ಟದ ಚರ್ಚೆ ನಡೆದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ಗೆ ನಡೆದಿರುವ ಹಗ್ಗಜಗ್ಗಾಟ ತಪ್ಪಿಸುವುದು, ಬಳ್ಳಾರಿಯಲ್ಲಿ ವೆಂಕಟೇಶ್ ಪ್ರಸಾದ್ ಮುನಿಸಿನಿಂದ ಉಂಟಾಗುವ ಹಾನಿ ನಿವಾರಿಸುವುದು ಈ ಚಿಂತನೆಯ ಒಳಗುಟ್ಟು.

ತಿಪ್ಪರಾಜು ಹವಾಲ್ದಾರ್ ತಮ್ಮ ರಾಜಕೀಯ ಗುರು ಶಾಸಕ ಕೆ.ಶಿವನಗೌಡ ನಾಯಕ ಜತೆ ಚರ್ಚಿಸದೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿದ್ದರು. ಇದರಿಂದಾಗಿ ತಿಪ್ಪರಾಜು ಹವಾಲ್ದಾರ್‌ಗೆ ಟಿಕೆಟ್ ನೀಡುವ ವಿಚಾರವನ್ನು ಶಿವನಗೌಡ ನಾಯಕರು ಪ್ರತಿಷ್ಠೆ ವಿಷಯವನ್ನಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜತೆಗೆ ತಮ್ಮ ಚಿಕ್ಕಪ್ಪ ಅನಂತರಾಜ್ ನಾಯಕರನ್ನು ಪರಿಗಣಿಸುತ್ತಿಲ್ಲವೆಂಬ ಅಸಮಾಧಾನವೂ ಅವರಲ್ಲಿದೆ. ಮತ್ತೊಂದೆಡೆ ಅಮರೇಶ್ವರ ನಾಯಕ ಅಭ್ಯರ್ಥಿಯಾಗುವ ಕುರಿತಂತೆ ಜಿಲ್ಲೆಯ ಯಾವೊಬ್ಬ ನಾಯಕರೊಂದಿಗೆ ಚರ್ಚಿಸದಿರುವುದು ಅವರಿಗೆ ಜಿಲ್ಲೆಯ ನಾಯಕರಿಂದ ಪೂರ್ಣ ಪ್ರಮಾಣದ ಬೆಂಬಲ ದೊರೆಯುತ್ತಿಲ್ಲ ಎಂದು ಪಕ್ಷದ ಮೂಲಗಳು ತಿಳಿಸುತ್ತಿವೆ.

ಟಿಕೆಟ್ ಆಕ್ಷಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಭ್ಯರ್ಥಿ ಹೆಸರು ಘೋಷಣೆ ವಿಳಂಬವಾಗುತ್ತಿದ್ದು, ರಾಯಚೂರು ಲೋಕಸಭೆ ಕ್ಷೇತ್ರಕ್ಕೆ 2ನೇ ಹಂತದಲ್ಲಿ ಚುನಾವಣೆ ನಡೆ ಯುವುದರಿಂದ 3ನೇ ಪಟ್ಟಿಯಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ ಮಾಡಲಿದ್ದಾರೆ.
ಜೆ.ಶರಣಪ್ಪಗೌಡ ಜಿಲ್ಲಾಧ್ಯಕ್ಷ, ಬಿಜೆಪಿ, ರಾಯಚೂರು

| ಶಿವಮೂರ್ತಿ ಹಿರೇಮಠ ರಾಯಚೂರು