ರಾಹುಲ್ ಸ್ಪರ್ಧೆ ಪರಿಣಾಮ ಬೀರಲ್ಲ, ಶಾಸಕ ಬಿ.ಶ್ರೀರಾಮುಲು ಹೇಳಿಕೆ, ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಪತನ

ರಾಯಚೂರು: ದಕ್ಷಿಣ ಭಾರತದ ಕೇರಳದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆಯಿಂದ ರಾಜ್ಯದ ಚುನಾವಣೆ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶಾಸಕ ಬಿ.ಶ್ರೀರಾಮುಲು ಹೇಳಿದರು. ನಗರದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದರು. ರಾಹುಲ್ ಗಾಂಧಿಗೆ ರಾಜ್ಯದ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಆಹ್ವಾನಿಸಲಾಗಿತ್ತು. ಆದರೆ, ಸೋಲಿನ ಭಯದಿಂದ ಅವರು ಸ್ಪರ್ಧಿಸಿಲ್ಲ ಎಂದರು.

ಸಿಎಂ ಎಚ್.ಡಿ.ಕುಮಾರಸ್ವಾಮಿ, ಅವರ ಸಹೋದರ ಸಚಿವ ರೇವಣ್ಣ ಹಾಸನ, ಮಂಡ್ಯ ಹಾಗೂ ತುಮಕೂರು ಚುನಾವಣೆಗಾಗಿ ಕಾಮಗಾರಿ ಮುಗಿಯುವ ಮೊದಲೇ ಗುತ್ತಿಗೆದಾರರಿಗೆ 1,344 ಕೋಟಿ ರೂ. ನೀಡಿ ಅವರಿಂದ ಚುನಾವಣೆಗಾಗಿ ಹಣ ಪಡೆದಿದ್ದಾರೆ. ಹೈಕ ಪ್ರದೇಶದಲ್ಲಿ ಕಾಮಗಾರಿ ಮುಗಿದು ವರ್ಷಗಳಾಗಿದ್ದರೂ ಹಣ ಬಿಡುಗಡೆಗಾಗಿ ಗುತ್ತಿಗೆದಾರರು ಚಪ್ಪಲಿ ಹರಿಯುವಂತೆ ಅಡ್ಡಾಡುತ್ತಿದ್ದಾರೆ. ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜತೆಗೆ ಚರ್ಚಿಸಿ ಚುನಾವಣೆ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಗುತ್ತಿಗೆದಾರರಿಗೆ ಮುಖಂಡ ಹಣ ನೀಡಿದ್ದ ಮಾಹಿತಿ ಸಿಕ್ಕ ಕಾರಣ ಐಟಿ ದಾಳಿ ನಡೆದಿದೆ. ಆದರೆ ಜವಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಮಮತಾ ಬ್ಯಾನರ್ಜಿ ತರಹ ಐಟಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಬಿಜೆಪಿ ನಾಯಕರ ಮನೆ ಮೇಲೂ ಐಟಿ ದಾಳಿ ನಡೆದಿದ್ದು, ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

ಕಾಂಗ್ರೆಸ್, ಜೆಡಿಎಸ್ ನಾಯಕರ ಮಧ್ಯೆ ಹೊಂದಾಣಿಕೆಯಿಲ್ಲ. ಲೋಕಸಭೆ ಚುನಾವಣೆ ನಂತರ ಸರ್ಕಾರ ತಾನಾಗಿಯೇ ಪತನವಾಗಲಿದೆ. ನಾವು ಆಪರೇಷನ್ ಕಮಲ ಮಾಡುವುದಿಲ್ಲ. ಬದಲಾವಣೆ ಗಾಳಿಗೆ ಸರ್ಕಾರ ತಾನಾಗಿಯೇ ಬೀಳಲಿದೆ ಎಂದು ಬಿ.ಶ್ರೀರಾಮುಲು ಭವಿಷ್ಯ ನುಡಿದರು. ಶಾಸಕ ವೆಂಕಟರೆಡ್ಡಿ ಮುದ್ನಾಳ್, ಮಾಜಿ ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್, ಹಾಲಪ್ಪ ಆಚಾರ್ ಇದ್ದರು.