ರಾಯಚೂರಿನಲ್ಲಿ ನ್ಯಾಯವಾದಿಗೆ ಬೇಡಿ ಹಾಕಿದ ಪಿಎಸ್‌ಐ

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಪೊಲೀಸರ ವರ್ತನೆಗೆ ಆಕ್ರೋಶ

ರಾಯಚೂರು: ವಕೀಲರೊಬ್ಬರಿಗೆ ಅಂಗಿ ಬಿಚ್ಚಿಸಿ ಕೈಕೊಳ ಹಾಕಿ ನಿಲ್ಲಿಸಿದ ಘಟನೆ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಈ ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುವ ಮೂಲಕ ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

ನಗರದ ಸ್ಟೇಷನ್ ವೃತ್ತದಲ್ಲಿ ಊಟ ತೆಗೆದುಕೊಂಡು ಹೋಗುತ್ತಿದ್ದ ಅಂಗವಿಕಲ ವಕೀಲ ವೀರಯ್ಯಸ್ವಾಮಿ ಎಂಬುವವರಿಗೆ ಪಶ್ಚಿಮ ಠಾಣೆ ಪಿಎಸ್‌ಐ ನಾಗರಾಜ ಇಲ್ಲಿ ಏಕೆ ನಿಂತಿದ್ದಿ ಎಂದು ಹೊಡೆದಾಗ ಇಬ್ಬರ ನಡುವೆ ಮಾತಿನ ಚಕಮಕಿ ಜರುಗಿದೆ. ನಂತರ ನ್ಯಾಯವಾದಿಯನ್ನು ಠಾಣೆಗೆ ಕರೆತಂದು ಕೈಕೊಳ ಹಾಕಿ ನಿಲ್ಲಿಸಲಾಗಿದ್ದು, ವಿಷಯ ತಿಳಿದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಭಾನುರಾಜ ಪೊಲೀಸರ ಜತೆಗೆ ಮಾತನಾಡಿ ಬಿಡಿಸಿ ಕರೆದುಕೊಂಡು ಹೋಗಿದ್ದಾರೆ.

ಆದರೆ, ನ್ಯಾಯವಾದಿಗೆ ಕೈಕೊಳ ಹಾಕಿ ನಿಲ್ಲಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ ಬುಧವಾರ ಸಭೆ ಸೇರಿದ ವಕೀಲರು ಪಿಎಸ್‌ಐ ವರ್ತನೆ ಖಂಡಿಸಿ ಏ.25ರಂದು ಕಲಾಪದಿಂದ ದೂರ ಉಳಿಯಲು ತೀರ್ಮಾನ ಕೈಗೊಂಡಿದ್ದಾರೆ. ವಕೀಲ ವೀರಯ್ಯಸ್ವಾಮಿಯನ್ನು ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ. ಗಂಭೀರ ಆರೋಪ ಮಾಡದ ನ್ಯಾಯವಾದಿಗೆ ಬೇಡಿ ಹಾಕಿದ ಪಿಎಸ್‌ಐ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಜಿಲ್ಲಾ ವಕೀಲರ ಸಂಘ ಒತ್ತಾಯಿಸಿದೆ.

ವಕೀಲರೊಬ್ಬರಿಗೆ ಪಿಎಸ್‌ಐ ಕೈಕೊಳ ಹಾಕಿರುವುದು ಗಮನಕ್ಕೆ ಬಂದಿದ್ದು, ಸಂಪೂರ್ಣ ವಿವರ ಪಡೆದ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು.
| ಡಿ.ಕಿಶೋರಬಾಬು, ಎಸ್ಪಿ, ರಾಯಚೂರು