ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ರದ್ದತಿಗಾಗಿ ರೈತರಿಂದ ಹೆದ್ದಾರಿ ಸಂಚಾರ ತಡೆ

ರಾಯಚೂರು: ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ( ಕೋಡಿಹಳ್ಳಿ ಬಣ) ನೇತೃತ್ವದಲ್ಲಿ ರೈತರು ತಾಲೂಕಿನ ವಡ್ಲೂರು ಕ್ರಾಸ್ ಹತ್ತಿರದ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ವಡ್ಲೂರು ಕ್ರಾಸ್ ಬಳಿ ಜಮಾವಣೆಗೊಂಡ ಸಂಘದ ಪದಾಧಿಕಾರಿಗಳು ಹಾಗೂ ರೈತರು, ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿದರು.

ಸಂಚಾರ ತಡೆ ಕೈ ಬಿಡುವಂತೆ ಪೊಲೀಸರು ಮಾಡಿದ ಮನವಿಗೆ ಪ್ರತಿಭಟನಾಕಾರರು ಸ್ಪಂದಿಸಲಿಲ್ಲ. ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತೆ ಶಿಲ್ಪಾ ಶರ್ಮಾಗೆ ಮನವಿ ಸಲ್ಲಿಸಿದ ನಂತರ ಸಂಚಾರ ತಡೆ ಹಿಂಪಡೆದರು.

ಭೂ ಸ್ವಾಧೀನ ಹೆಸರಿನಲ್ಲಿ ರೈತರ ಜಮೀನನ್ನು ಸರ್ಕಾರ ವಶಪಡಿಸಿಕೊಂಡು ಸೂಕ್ತ ಪರಿಹಾರ ನೀಡದೆ ವಂಚಿಸುತ್ತಿದೆ. ಕೇಂದ್ರದ ಭೂಸ್ವಾಧೀನ ಕಾಯ್ದೆಗೆ ವಿರೋಧ ವ್ಯಕ್ತವಾಗಿದ್ದರಿಂದ ರಾಜ್ಯಗಳಿಗೆ ಅಧಿಕಾರ ನೀಡಲಾಗಿತ್ತು. ಆದರೆ, ಸರ್ಕಾರ ಚರ್ಚೆ ಮಾಡದೆ ಅಂಗೀಕಾರ ಮಾಡಿರುವುದು ಖಂಡನೀಯ. ಸರ್ಕಾರಿ ಯೋಜನೆಗಳಿಗೆ ಅಗತ್ಯವಿರುವ ಜಮೀನುಗಳಿಗಿಂದ ಹೆಚ್ಚುವರಿ ವಶಪಡಿಸಿಕೊಂಡು ರೈತರನ್ನು ಬೀದಿ ಪಾಲು ಮಾಡುವ ಕೆಲಸ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಚರ್ಚೆಯಿಲ್ಲದೆ ವಿಧಾನಸಭೆಯಲ್ಲಿ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಅಂಗಿಕರಿಸಿರುವುದನ್ನು ಹಿಂಪಡೆಯಬೇಕು. ಆರ್‌ಟಿಪಿಎಸ್ ಮತ್ತು ವೈಟಿಪಿಎಸ್‌ಗೆ ಭೂಮಿ ಕಳೆದುಕೊಂಡ ರೈತರಿಗೆ ಅತ್ಯಲ್ಪ ಪರಿಹಾರ ನೀಡಿದ್ದು, ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ವಾಸುದೇವ ಮೇಟಿ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ ರೆಡ್ಡಿ, ಉಮಾದೇವಿ, ಕೃಷ್ಣ, ಬಸವರಾಜ, ಹನುಮೇಶ, ನರಸಿಂಹಲು, ವೈಟಿಪಿಎಸ್ ಭೂ ಸಂತ್ರಸ್ತರು ಇದ್ದರು.

ಹೆದ್ದಾರಿ ಸಂಚಾರ ಬಂದ್‌ನಿಂದ ರಸ್ತೆ ಮಾರ್ಗವಾಗಿ ಹೈದರಾಬಾದ್‌ಗೆ ಸಂಚರಿಸುವ ಪ್ರಯಾಣಿಕರು, ಶಕ್ತಿನಗರ ವಿವಿಧ ಕಾರ್ಖಾನೆಗಳಿಗೆ ತೆರಳುವ ನೌಕರರು ಹಾಗೂ ವಿದ್ಯಾರ್ಥಿಗಳು ತೊಂದರೆ ಎದುರಿಸಿದರು. ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪರೀಕ್ಷೆ ಹಿನ್ನೆಲೆಯಲ್ಲಿ ಹೋರಾಟಗಾರರು, ಪೊಲೀಸರು ರಸ್ತೆ ಪಾರು ಮಾಡಲು ಅನುಕೂಲ ಮಾಡಿಕೊಟ್ಟರು.

Leave a Reply

Your email address will not be published. Required fields are marked *