ರಾಯಚೂರು: ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ರಿಮ್ಸ್)ಯಲ್ಲಿ ಎಸಿ ಖರೀದಿ, ಹೊರಗುತ್ತಿಗೆ ಸಿಬ್ಬಂದಿಗಳ ನೇಮಕದಲ್ಲಿ ಅಕ್ರಮವಾಗಿದ್ದು, ಕೂಡಲೇ ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಯಚೂರು ವಿವಿಧ ಸಂಘಟನೆಗಳ ಒಕ್ಕೂಟದ ಸಂಚಾಲಕ ರಾಜು ಪಟ್ಟಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ರಿಮ್ಸ್ ಸಂಸ್ಥೆಯು ಸರ್ಕಾರದ ಸ್ವಾಯುತ್ತ ಸಂಸ್ಥೆಯಾಗಿದ್ದು, ತನ್ನದೇ ಆದ ಆಡಳಿತ ಮಂಡಳಿ ಹಾಗೂ ಆರ್ಥಿಕ ಹಣಕಾಸು ಸಮಿತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ರಿಮ್ಸ್‌ನಲ್ಲಿ 72 ಎಸಿಗಳನ್ನು ಖರೀದಿಸಿ ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಖರೀದಿಸಿರುವ ಎಸಿಗಳ ಒಟ್ಟು ಮೊತ್ತ 59 ಲಕ್ಷ ರೂ.ಗಳ ಅನುದಾನ ಬಳಕೆ ಮಾಡಿಕೊಳ್ಳಲು ಸಕ್ಷಮ ಪ್ರಾಧಿಕಾರದಿಂದಲೂ ಅನುಮತಿ ಪಡೆಯದೇ ಅನುದಾನವನ್ನು ಬಳಸಿಕೊಳ್ಳಲಾಗಿದೆ ಎಂದರು.
ಎಸಿಗಳನ್ನು ಖರೀದಿಸಿದ ಬಿಲ್ಲುಗನ್ನು ಅಂದಿನ ರಿಮ್ಸ್ ಪ್ರಭಾರಿ ಆಡಳಿತಾಧಿಕಾರಿ ಮತ್ತು ಪ್ರಭಾರಿ ಹಣಕಾಸು ಅಧಿಕಾರಿಯಾಗಿದ್ದ ಗುರುಸಿದ್ದಯ್ಯ ಹಿರೆಮಠ ಹಾಗೂ ರಿಮ್ಸ್‌ನ ಪ್ರಭಾರಿ ನಿರ್ದೇಶಕ ಡಾ.ಬಿ.ಎಚ್.ರಮೇಶ ಅವರ ಸಹಿ ಮೂಲಕ ಪಾವತಿಸಲಾಗಿದೆ ಎಂದು ತಿಳಿಸಿದರು.
ಇದಲ್ಲದೇ ರಿಮ್ಸ್ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೌಕರರು ಮತ್ತು ಸಿಬ್ಬಂದಿಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವ್ಯವಹಾರವಾಗಿದ್ದು, ಸ್ಟಾಫ್ ನರ್ಸ್, ಕಂಪ್ಯೂಟರ್ ಆಪರೇಟರ್ಸ್ ಹಾಗೂ ಪ್ಯಾರಾಮೆಡಿಕಲ್ ಟೆಕ್ನಿಷಿಯನ್ಸ್ ಹುದ್ದೆಗೆ ಅನರ್ಹರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ಈ ಎಲ್ಲ ಅವ್ಯವಹಾರಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಕೂಡಲೇ ತನಿಖೆಗೆ ಆದೇಶಿಸಬೇಕು. ಜತೆಗೆ ಇದರಲ್ಲಿ ಶಾಮೀಲಾದ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು. ಇಲ್ಲವಾದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ವೈ.ನರಸಪ್ಪ, ಈಶ್ವರ ಯಕ್ಲಾಸಪೂರ, ಚಂದ್ರಶೇಖರ, ಪರಶುರಾಮ, ನಾಗಪ್ಪ, ಹನುಮಂತು ಸೇರಿದಂತೆ ಇತರರಿದ್ದರು.