ಕನ್ನಡದ ಪ್ರಾಬಲ್ಯ ಕುಗ್ಗಿಸುವ ಶಕ್ತಿ ಮತ್ತೊಂದು ಭಾಷೆಗಿಲ್ಲ

ರಾಯಚೂರು: ದೇಶದ ಯಾವುದೇ ಭಾಷೆಗೆ ಕನ್ನಡದ ಪ್ರಾಬಲ್ಯ ಕುಗ್ಗಿಸುವುದು ಸುಲಭವಲ್ಲ. ಎಂಥವರನ್ನೂ ತನ್ನತ್ತ ಸೆಳೆಯುವ ಪ್ರಸನ್ನತೆ ಹೊಂದಿರುವ ಕಸ್ತೂರಿ ಇದ್ದಂತೆ ಕನ್ನಡ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ.

ಮಂತ್ರಾಲಯ ಮಠದ ದಾಸ ಮಂಟಪದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಹಾಗೂ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಹಮ್ಮಿಕೊಂಡಿದ್ದ ದಾಸ ಸಾಹಿತ್ಯ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಆಶೀರ್ವಚನ ನೀಡಿದರು. ವಿವಿಧ ಭಾಷೆಗಳಿದ್ದರೂ, ಕನ್ನಡದಲ್ಲಿರುವಷ್ಟು ಸಾಹಿತ್ಯ ಸಂಪತ್ತು ಮತ್ತೊಂದು ಭಾಷೆಯಲ್ಲಿ ಕಾಣುವುದು ಅಪರೂಪ. ಗಡಿ ಭಾಗದಲ್ಲಿ ಕನ್ನಡಿಗರನ್ನು ಒಗ್ಗೂಡಿಸುವ ಕಸಾಪದ ಪ್ರಯತ್ನಕ್ಕೆ ಶ್ರೀಮಠ ಸಹಕಾರ ನೀಡಲಿದೆ ಎಂದರು.

ವಿಜಯದಾಸರ, ಜಗನ್ನಾಥ ದಾಸರ, ಪುರಂದರ ದಾಸರ, ಪ್ರಾಣೇಶ ದಾಸರಾದಿಯಾಗಿ ಬಹುತೇಕರಿಗೆ ಮಂತ್ರಾಲಯ ಸ್ಫೂರ್ತಿ ಕೇಂದ್ರವಾಗಿತ್ತು. ಆಧ್ಯಾತ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಶ್ರೀಮಠ ಸೇವೆ ನಿರಂತರವಾಗಿದೆ. ಮಂತ್ರಾಲಯವು ಆಂಧ್ರದಲ್ಲಿದ್ದರೂ ಭಾವನಾತ್ಮಕವಾಗಿ ಕನ್ನಡಿಗರಲ್ಲಿ ರಾಯರು ನೆಲೆಸಿದ್ದಾರೆ. ಮುಂದಿನ ದಿನಗಳಲ್ಲಿ ಪರಿಷತ್ತು ವಚನ, ಹರಿದಾಸ ಸಾಹಿತ್ಯ ಸಮ್ಮಿಲನದ ಶೈಕ್ಷಣಿಕ, ಧಾರ್ಮಿಕ, ಸಮಾಜ ಸುಧಾರಣೆಯ ಜಂಟಿ ಸಮ್ಮೇಳನ ಆಯೋಜಿಸಲು ಮುಂದೆ ಬಂದರೆ ಶ್ರೀಮಠ ಸಹಕಾರ ನೀಡಲಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಕಾರ‌್ಯಕ್ರಮದಲ್ಲಿ ಗುರು ಸಾರ್ವ ಭೌಮ ಸಂಸ್ಕೃತ ವಿದ್ಯಾಪೀಠದ ಪ್ರಾಚಾರ್ಯ ಡಾ.ಎನ್. ವಾದಿರಾಜಾಚಾರ್ಯ, ನಿವೃತ್ತ ಪ್ರಾಚಾರ್ಯ ಡಾ.ವಿಜಯ್‌ರಾವ್ ಕುಪನೇಶಿ, ಮಂತ್ರಾಲಯದ ವೈದ್ಯಾಧಿಕಾರಿ ಸುಧೀಂದ್ರ, ಮುದಗಲ್ ವೈದ್ಯರಾದ ಗುರುರಾಜ ದೇಶಪಾಂಡೆ, ಸಾಹಿತಿ ಚಿದಾನಂದ ಸಾಲಿ, ಡಾ. ಜಯಲಕ್ಷ್ಮೀ ಮಂಗಳಮೂರ್ತಿ, ಶಿಕ್ಷಣಾಧಿಕಾರಿ ಆರ್.ಇಂದಿರಾ, ಕಸಾಪ ಜಿಲ್ಲಾ ಕಾರ್ಯದರ್ಶಿ ಭೀಮ ನಗೌಡ ಇಟಗಿ, ತಾಲೂಕಾಧ್ಯಕ್ಷೆ ಗಿರಿಜಾ ರಾಜಶೇಖರ, ಡಾ.ಶೀಲಾಕುಮಾರಿ ದಾಸ್, ಟಿ. ಬಸವರಾಜ, ಮೋಯಿನುದ್ದೀನ್ ಕಾಟಮಳ್ಳಿ, ಬಸವರಾಜ ಬ್ಯಾಗವಾಟ್, ಮೂಕಪ್ಪ ಕಟ್ಟಿಮನಿ, ಶ್ರೀಶೈಲಗೌಡ ಇತರರಿದ್ದರು.

ದಾಸ, ಶರಣ ಪರಂಪರೆಯಲ್ಲಿ ಬೆಳೆದು ಬಂದಿರುವ ಕನ್ನಡದಲ್ಲಿನ ಸಾಹಿತ್ಯ ಸಂಪತ್ತನ್ನು ಉಳಿಸಿ, ಬೆಳೆಸುವ ಕಾರ್ಯ ನಿರಂತರವಾಗಿರಲಿ. ಆ ನಿಟ್ಟಿನಲ್ಲಿ ಕಸಾಪದ ಪ್ರಯತ್ನ ಶ್ಲಾಘನಿಯ. ಭಾಷೆಗೆ ಗಡಿಗಳಿಲ್ಲ, ಭಾವನೆ ಮುಖ್ಯ. ವಿದ್ವಾಂಸರು, ಪಂಡಿತರು ಕನ್ನಡವನ್ನು ತಿರಸ್ಕರಿಸಿ, ಸಂಸ್ಕೃತವನ್ನು ಅಪ್ಪಿಕೊಂಡರೂ, ದಾಸವರ್ಯರು ಕನ್ನಡವನ್ನೆ ಅಪ್ಪಿಕೊಂಡು ಜನಸಾಮಾನ್ಯರ ಆಡು ಭಾಷೆಯಲ್ಲಿ ರಚಿಸಿದ ಸಾಹಿತ್ಯ ಇಂದಿಗೂ ಜನಮಾನಸದಲ್ಲಿ ಉಳಿದಿದೆ.
| ಶ್ರೀ ಸುಬುಧೇಂದ್ರ ತೀರ್ಥರು, ಮಂತ್ರಾಲಯ ಮಠದ ಪೀಠಾಧಿಪತಿ