ಹೈಕ ಪ್ರತ್ಯೇಕ ರಾಜ್ಯ ಹೋರಾಟ ನಿಲ್ಲದು

ರಾಯಚೂರು: ಹೈದರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಿರುವ ಹೋರಾಟವನ್ನು ನಿಲ್ಲಿಸುವುದಿಲ್ಲ. ಕೆಲ ಹೋರಾಟಗಾರರು ಪ್ರತ್ಯೇಕ ರಾಜ್ಯದಿಂದ ಉಪಯೋಗವಿಲ್ಲ ಎನ್ನುವ ಹೇಳಿಕೆ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೈಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಗಂಗಾಧರ ಕುಷ್ಟಗಿ ಹೇಳಿದರು.

ಹೈಕ ಪ್ರದೇಶದ ಜನ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಿದರೆ ಹತ್ತಿಕ್ಕಲಾಗುತ್ತಿದೆ. ಆದರೆ, ಮುಂಬೈ ಕರ್ನಾಟಕದ ಜನ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಿದರೆ ಅದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಆರೋಪಿಸಿದರು. ಅಖಂಡ ಕರ್ನಾಟಕದ ಗಿಳಿಪಾಠವನ್ನು ಪ್ರೊ.ಬರಗೂರು ರಾಮಚಂದ್ರಪ್ಪ ಸೇರಿ ಹಲವರು ಒಪ್ಪಿಸುತ್ತಿದ್ದಾರೆ. ಆದರೆ, ಅವರಿಗೆ ಇಲ್ಲಿಯ ಭಾಗದ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಸರ್ಕಾರ ಹಾಗೂ ಮತ್ತೊಬ್ಬರನ್ನು ಖುಷಿ ಪಡಿಸಲು ಹೇಳಿಕೆ ನೀಡುವ ಬದಲು ಅವರು ವಾಸ್ತವಾಂಶಗಳನ್ನು ಅರಿತುಕೊಳ್ಳಬೇಕು ಎಂದರು.

ಹೈಕ ಭಾಗ ಹಿಂದುಳಿಯಲು ಪ್ರಕೃತಿ ವಿಕೋಪಕ್ಕಿಂತ ಸರ್ಕಾರಗಳು ಮಾಡಿದ ವಿಕೋಪಗಳೇ ಹೆಚ್ಚಾಗಿವೆ. ನಮ್ಮ ರೈತರು ನೀರಿಲ್ಲದೆ ಪರದಾಡುತ್ತಿದ್ದರೆ, ಆಂಧ್ರ, ತೆಲಂಗಾಣಕ್ಕೆ ನಮ್ಮ ನದಿಗಳಿಂದ ನೀರು ಹರಿದು ಹೋಗುತ್ತಿದೆ. ಸರ್ಕಾರ ನಮ್ಮ ಪಾಲಿನ ನೀರನ್ನು ಎಷ್ಟು ಬಳಕೆ ಮಾಡಿಕೊಂಡಿದೆ ಎಂದು ಶ್ವೇತಪತ್ರ ಹೊರಡಿಸಿದರೆ ಸತ್ಯಾಂಶ ಹೊರಬರಲಿದೆ. ನಮ್ಮಲ್ಲಿ ಅಪೌಷ್ಟಿಕತೆ, ಅನಕ್ಷರತೆ ತಾಂಡವವಾಡುತ್ತಿದ್ದು, ಬಡತನಕ್ಕೆ ನಮ್ಮ ರಾಜಕಾರಣಿಗಳು ಗುಲಾಮರಾಗಿರುವುದು ಕಾರಣವಾಗಿದೆ. ನಮ್ಮ ಭಾಗದ ಶಾಸಕ ನಮ್ಮ ಪ್ರತಿನಿಧಿಗಳಾಗಿ ಮಾತನಾಡದೆ ಸಿಎಂ ಪಿಆರ್‌ಒ ತರಹ ಮಾತನಾಡುತ್ತಾರೆ. ಅವರಿಗೆ ಆಲಮಟ್ಟಿ ಎತ್ತರ ಹೆಚ್ಚಿಸಿ ನೀರಿನ ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಗೌತಮ್ ಯಾದವ್, ನಿಂಗಪ್ಪ ಪೂಜಾರ್, ಮಹ್ಮದ್ ಶೋಯಬ್ ಉಪಸ್ಥಿತರಿದ್ದರು.

** ಕೋಟ್
ಸಣ್ಣ ರಾಜ್ಯಗಳಾದರೆ ಉಪಯೋಗವಿಲ್ಲ ಎಂದು ಈಶಾನ್ಯ ಭಾರತದ ರಾಜ್ಯಗಳ ಉದಾಹರಣೆ ಕೊಡುವುದು ಸರಿಯಲ್ಲ. ಅಲ್ಲಿ ನೈಸರ್ಗಿಕ ಸಂಪತ್ತಿನ ಕೊರತೆಯಿದ್ದು, ಹೈಕ ಭಾಗದಲ್ಲಿ ನೈಸರ್ಗಿಕ ಸಂಪತ್ತು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅಭಿವೃದ್ಧಿಗೆ ಪೂರಕವಾಗಿದೆ.
| ಗಂಗಾಧರ ಕುಷ್ಟಗಿ ಹೈಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ