ಹೈಕ ಹಿಂದುಳಿಯಲು ಖರ್ಗೆ, ಧರ್ಮಸಿಂಗ್ ಕಾರಣ

ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ ಆರೋಪ

ರಾಯಚೂರು: ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ಬರುವುದಕ್ಕೆ ಹಲವು ದಶಕಗಳ ಕಾಲ ಅಧಿಕಾರದಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಕಾರಣರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ ಆರೋಪಿಸಿದರು.

ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಏಳೆಂಟು ಬಾರಿ ಶಾಸಕರಾಗಿ, ಸಂಸದರಾಗಿ ಅಧಿಕಾರ ಅನುಭವಿಸಿದರೂ ಈ ಭಾಗದ ಅಭಿವೃದ್ಧಿಗೆ ಮುಂದಾಗಲಿಲ್ಲ. ಹಲವು ಸಮುದಾಯದ ನಾಯಕರ ಬೆಂಬಲ ಪಡೆದು ನಂತರ ಅವರನ್ನು ಮೂಲೆಗುಂಪು ಮಾಡುವುದು ಅವರ ಜಾಯಮಾನವಾಗಿದೆ ಎಂದರು.

ಕಳೆದ ಚುನಾವಣೆಯಲ್ಲಿ ರಾಯಚೂರು ಮತ್ತು ಕಲಬುರಗಿ ಕ್ಷೇತ್ರಗಳನ್ನು ನಾವು ಕಳೆದುಕೊಂಡಿದ್ದೇವು. ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಮನೆಗೆ ಹೋಗಲಿದ್ದು, ಕಾಂಗ್ರೆಸ್‌ನಲ್ಲಿನ ಒಳ ಬೇಗುದಿಗೆ ಖರ್ಗೆ ಸೋಲಲಿದ್ದಾರೆ. ಉಮೇಶ ಜಾದವ್ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.

ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಳ್ಳಲಾಗಿದ್ದು, ಪ್ರಧಾನಿ ಮೋದಿ ಅವರು ಸುಭದ್ರ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳಿಂದ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಬಿಜೆಪಿ ಸೋಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡೆಸುತ್ತಿರುವ ಷಡ್ಯಂತ್ರ ಅವರಿಗೆ ತಿರುಗುಬಾಣವಾಗಲಿದೆ. ರಾಜ್ಯದಲ್ಲಿ ಕಳೆದ 9 ತಿಂಗಳಿಂದ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರ ಪೈಪೋಟಿಗೆ ಬಿದ್ದಂತೆ ಜನರ ಹಣ ಕೊಳ್ಳೆ ಹೊಡೆಯುತ್ತಿದೆ ಎಂದು ದೂರಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾ ಅಧ್ಯಕ್ಷ ಜೆ.ಶರಣಪ್ಪಗೌಡ, ಮುಖಂಡರಾದ ಅಶೋಕ ಗಸ್ತಿ, ಗಂಗಾಧರ ಎಲಿ, ತ್ರಿವಿಕ್ರಮ ಜೋಷಿ, ಯು.ದೊಡ್ಡಮಲ್ಲೇಶ, ಕೆ.ಎಂ.ಪಾಟೀಲ್, ಚಂದ್ರಶೇಖರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *