ರಾಯಚೂರು: ವೇತನ ಹೆಚ್ಚಳ, ಬಿಸಿಯೂಟ ಖಾಸಗೀಕರಣ ಕೈಬಿಡುವುದು ಸೇರಿದಂತೆ ಬಿಸಿಯೂಟ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಸಿಐಟಿಯು ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಸಾರ್ವಜನಿಕ ಉದ್ಯಾನದಿಂದ ಟಿಪ್ಪು ಸುಲ್ತಾನ ಉದ್ಯಾನದವರೆಗೆ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ‌್ಯಾಲಿ ಮಾಡಲಾಯಿತು. 2014ರಿಂದ ಕೇಂದ್ರ ಸರ್ಕಾರ ಬಿಸಯೂಟ ನೌಕರರ ಗೌರವಧನ ಹೆಚ್ಚಳ ಮಾಡಿಲ್ಲ. ಕೂಡಲೇ ಬಿಸಿಯೂಟ ನೌಕರರಿಗೆ 26 ಸಾವಿರ ರೂ.ಗಳ ವರೆಗೆ ಗೌರವಧನವನ್ನು ಹೆಚ್ಚಿಸಬೇಕು. ಗೌರವಧನ ಹೆಚ್ಳಳ ಮಾಡುವವರೆಗೂ ನೆರೆರಾಜ್ಯಗಳಲ್ಲಿ ನೀಡಿದಂತೆ 7 ಸಾವಿರದಿಂದ 12 ಸಾವಿರ ವೇತನವನ್ನು ನೀಡಬೇಕು ಎಂದು ಒತ್ತಾಯಿಸಲಾಯಿತು.
ಸಾದಿಲ್ವಾರು ವೆಚ್ಚದ ಜಂಟಿ ಖಾತೆಯ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್ಡಿಎಂಸಿಗೆ ವರ್ಗಾವಣೆ ಮಾಡಲಾಗಿದ್ದು, ಇದನ್ನು ವಾಪಸ್ ಪಡೆದು ಮೊದಲಿನ ವ್ಯವಸ್ಥೆ ಜಾರಿಯಾಗಬೇಕು. ಅಡುಗೆ ಕೋಣೆಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಬೇಕು. ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ವರ್ಷದ 12 ತಿಂಗಳು ಕೆಲಸ ಮತ್ತು ಕನಿಷ್ಠ ಕೂಲಿ ಜಾರಿಯಾಗಬೇಕು ಎಂದು ಆಗ್ರಹಿಸಲಾಯಿತು.
ಪ್ರತಿ ಜಿಲ್ಲೆಗಳಲ್ಲಿ ಕ್ಲಸ್ಟರ್ ಸಭೆಗಳನ್ನು ಮಾಡಬೇಕು. ಕೆಲಸದ ಅವಧಿಯನ್ನು 4 ಗಂಟೆಯಿಂದ 6 ಗಂಟೆಗಳಿಗೆ ಅಕ್ಷರದಾಸೋಹ ಕೈಪಿಡಿ ಮಾದರಿಯಂತೆ ಬದಲಾಯಿಸಬೇಕು. ಅಕ್ಷರ ದಾಸೋಹ ಯೋಜನೆಯು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿ ನಡೆಸಬೇಕು. ಕೆಲಸದ ಸ್ಥಳದಲ್ಲಿ ಮರಣ ಹೊಂದಿದ ನೌಕರರಿಗೆ 25 ಲಕ್ಷ ರೂ.ಗಳ ಪರಿಹಾರ ಒದಗಿಸಬೇಕು. ಶಾಲಾ ರಜೆ ಸಮಯದಲ್ಲಿಯೂ ವೇತನವನ್ನು ಕಡ್ಡಾಯವಾಗಿ ನೀಡುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷೆ ವರಲಕ್ಷ್ಮೀ, ಜಿಲ್ಲಾಧ್ಯಕ್ಷೆ ರೇಣುಕಮ್ಮ, ಕಾರ್ಯದರ್ಶಿ ಮರಿಯಮ್ಮ, ಖಜಾಂಚಿ ಮಹಮ್ಮದ್ ಅನೀಫ್, ಪ್ರಮುಖರಾದ ಅಕ್ಕಮಹಾದೇವಿ, ಕಲ್ಯಾಣಮ್ಮ, ನಾಗಮ್ಮ, ಡಿ.ಎಸ್.ಶರಣಬಸವ, ಕೆ.ಜಿ.ವೀರೇಶ, ರಮೇಶ ವೀರಾಪುರ, ವಿಶಾಲಾಕ್ಷಮ್ಮ, ಶರಣಮ್ಮ ಪಾಟೀಲ್, ರೇಣುಕಮ್ಮ, ಶಕ್ಷಾಖಾದ್ರಿ ಸೇರಿದಂತೆ ಇತರರಿದ್ದರು.