ಹಾರೋಬೂದಿ ಹೊಂಡ ಸ್ಥಳಾಂತರಿಸಿ

ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳ ಒತ್ತಡ | ಸಂಚಾರ ತಡೆ ಪ್ರತಿಭಟನೆ

ರಾಯಚೂರು: ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ ಹೊರ ಸೂಸುವ ಹಾರೋಬೂದಿ ಅಕ್ರಮ ಸಾಗಣೆ ತಡೆಗೆ ಆಗ್ರಹಿಸಿ ಶಕ್ತಿನಗರದಲ್ಲಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು, ಗ್ರಾಮಸ್ಥರು ರಾಜ್ಯ ಹೆದ್ದಾರಿ ಸಂಚಾರ ತಡೆ ಪ್ರತಿಭಟನೆ ನಡೆಸಿದರು.

ನಂತರ ತಹಸೀಲ್ದಾರ್ ಅನಿಲ್‌ಕುಮಾರ್ ಆರೋಲಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಚಾರ ತಡೆ ಪ್ರತಿಭಟನೆಯಿಂದ ಕೆಲ ಸಮಯ ವಾಹನಗಳ ಸಂಚಾರ ಅಸ್ತವ್ಯಸ್ಥಗೊಂಡಿತು. ಪೊಲೀಸರು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಸಂಚಾರ ವ್ಯವಸ್ಥೆ ಸರಿಪಡಿಸಿದರು.

ವಿದ್ಯುತ್ ಕೇಂದ್ರದಲ್ಲಿರುವ ಹೊಂಡದಲ್ಲಿ ಅಧಿಕಾರಿಗಳು ಸುರಕ್ಷತೆ ನಿಯಮ ಪಾಲನೆ ಪಾಲಿಸುತ್ತಿಲ್ಲ. ಕೂಲಿ ಕಾರ್ಮಿಕರೆ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಜಾಗದ ಪಕ್ಕದಲ್ಲೇ ಹಾರೋಬೂದಿ ಸಂಗ್ರಹಿಸಲಾಗುತ್ತಿದೆ. ಪ್ರತಿ ದಿನ 200ಕ್ಕೂ ಅಧಿಕ ಲಾರಿಗಳಲ್ಲಿ 30-40 ಟನ್ ಒವರ್‌ಲೋಡ್ ಮಾಡಿಕೊಂಡು ಸಾಗಿಸಲಾಗುತ್ತಿದೆ ಎಂದು ಆರೋಪಿಸಿದರು.

ನಿಯಮಾನುಸಾರ ಟ್ಯಾಂಕರ್ ಲಾರಿಯಲ್ಲಿ ಹಾರೋಬೂದಿ ಸಾಗಿಸಬೇಕು. ಆದರೆ, ಟಿಪ್ಪರ್‌ಗಳಲ್ಲಿ ಸಾಗಣೆ ಮಾಡುತ್ತಿದ್ದರೂ ಸಾರಿಗೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಕೂಡಲೇ ಜನವಸತಿ ಪ್ರದೇಶದಿಂದ ಹಾರೋಬೂದಿ ಹೊಂಡವನ್ನು ಸ್ಥಳಾಂತರಿಸಬೇಕು. ಮುಖ್ಯಧ್ವಾರದಲ್ಲಿ ತೂಕಕ್ಕಾಗಿ ವೇಬ್ರೀಡ್ಜ್, ಸಿಸಿ ಕ್ಯಾಮರಾ ಅಳವಡಿಸಬೇಕು. ನಿಯಮಾನುಸಾರ ಲಾರಿಯಲ್ಲಿ ಹಾರೋಬೂದಿ ತುಂಬುವಂತೆ ನೋಡಲು ಅಧಿಕಾರಿಗಳ ನಿಯುಕ್ತಿಗೊಳಿಸಿ ರಿಜಿಸ್ಟರ್‌ನಲ್ಲಿ ನಮೂದಿಸಬೇಕು. ಪೊಲೀಸ್ ಇಲಾಖೆ ಅಕ್ರಮಕ್ಕೆ ಕಡಿವಾಣ ಹಾಕಬೇಕು, ಕೆಪಿಸಿ ಆಡಳಿತ ಮಂಡಳಿ ಹಾರೋಬೂದಿ ನಿರ್ವಹಣೆ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾ ಅಧ್ಯಕ್ಷ ಎಸ್.ಶಿವಕುಮಾರ ಯಾದವ್, ತಾಲೂಕು ಅಧ್ಯಕ್ಷ ಸುರೇಶ ಮಡಿವಾಳ, ಉಪಾಧ್ಯಕ್ಷ ಸುರೇಶ ಈಳಿಗೇರ್, ನಗರಾಧ್ಯಕ್ಷ ಫ್ರಾಂಕ್ಲಿನ್ ಪದಾಧಿಕಾರಿಗಳಾದ ಸೂಗಪ್ಪ ವಗ್ಗಾರ್, ವೆಂಕಟೇಶ ನಾಯಕ, ಮರಲಿಂಗ ಮಡಿವಾಳ, ರಮೇಶ, ನರಸಪ್ಪ, ಹೇಮರೆಡ್ಡಿ, ಅರುಣ, ಜಾಫರ್ ಷರೀಫ್, ಅಜಾರ್, ಶೇಖರ ಕೊಂಡಪುರ್, ಅಲಿ, ರಂಜಾನ್, ರಾಜಸಾಬ್, ಕಲ್ಮಲಾ ರಮೇಶ ಇದ್ದರು.