ರಾಜ್ಯಪಾಲರ ಕಚೇರಿ ದುರ್ಬಳಕೆ ತಡೆಯಿರಿ

ಸಿಪಿಐಎಂ ಪದಾಧಿಕಾರಿಗಳ ಒತ್ತಾಯ

ರಾಯಚೂರು: ರಾಜ್ಯದ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ಬೀಳಿಸಲು ರಾಜ್ಯಪಾಲರು ಹಾಗೂ ರಾಜ್ಯಪಾಲರ ಕಚೇರಿಯನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಡೆಯಬೇಕೆಂದು ಒತ್ತಾಯಿಸಿ ಸಿಪಿಐಎಂ ಪದಾಧಿಕಾರಿಗಳು ನಗರದ ಡಿಸಿ ಕಚೇರಿ ಎಡಿಸಿ ಗೋವಿಂದರೆಡ್ಡಿ ಮೂಲಕ ರಾಷ್ಟ್ರಪತಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.

ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲ ಶಾಸಕರ ಕುಮ್ಮಕ್ಕಿಗೆ ಬಿಜೆಪಿಯವರು ರಾಜ್ಯಪಾಲರ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ. ಪ್ರತಿ ಗಂಟೆಗೊಮ್ಮೆ ಆದೇಶ ನೀಡುವ ರಾಜ್ಯಪಾಲರ ನಡೆ ಅನುಮಾನ ಮೂಡಿಸುತ್ತಿದೆ ಎಂದು ಟೀಕಿಸಿದರು. ರಾಜಕೀಯ ಪಕ್ಷಗಳ ವಿಪ್ ಅಧಿಕಾರದ ಕ್ರಿಯಾ ಲೋಪದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯಪಾಲರು ಮಧ್ಯಾಹ್ನ 1.30ರೊಳಗೆ ವಿಶ್ವಾಸ ಮತ ಸಾಬೀತು ಪಡಿಸುವಂತೆ ನಿರ್ದೇಶನ ನೀಡುವುದು ಎಷ್ಟು ಸಮಂಜಸ. ಬಹುಮತ ಇಲ್ಲದಿದ್ದರೂ, ಮೈತ್ರಿ ಸರ್ಕಾರ ಬಂದಾಗಿನಿಂದ ಅಪರೇಷನ್ ಕಮಲದ ಹೆಸರಲ್ಲಿ ರಾಜ್ಯಪಾಲರ ಕಚೇರಿ ಹಾಗೂ ಅಧಿಕಾರವನ್ನು ದುರ್ಬಳಕೆ ಮಾಡುವ ಹುನ್ನಾರಕ್ಕೆ ಕೈ ಹಾಕಿರುವುದು ಸರಿಯಲ್ಲ ಎಂದರು.

ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಮಳೆ ಇಲ್ಲದೆ ಜನ ಗುಳೆ ಹೋಗುತ್ತಿದ್ದಾರೆ. ಶಾಸಕರು ತಮ್ಮ ಕ್ಷೇತ್ರದ ಜನರ ಅಭ್ಯುದಯಕ್ಕೆ ಏನು ಮಾಡದೆ ರೇಸಾರ್ಟ್ ರಾಜಕೀಯಕ್ಕೆ ಇಳಿದು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತಂದಿದ್ದಾರೆ. ಇದನ್ನು ವಿರೋಧ ಪಕ್ಷದವರು ಸಮರ್ಥವಾಗಿ ಪ್ರಶ್ನಿಸಿ ಆಡಳಿತ ಪಕ್ಷವನ್ನು ಕಟ್ಟಿ ಹಾಕುವ ಪ್ರಯತ್ನ ಮಾಡದೆ ಅಧಿಕಾರಕಾರದ ವ್ಯಾಮೋಹಕ್ಕೆ ಬಿದ್ದಿದೆ. ಕೂಡಲೆ ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ ಸದನದ ಹಕ್ಕು ಉಳಿಸಬೇಕಲ್ಲದೆ, ಇಂತಹ ಪ್ರಜಾಪ್ರಭುತ್ವದ ವಿರೋಧಿ ನಿಲುವುಗಳಿಗೆ ಕಡಿವಾಣ ಹಾಕಿ. ನ್ಯಾಯ ಸಮ್ಮತವಾಗಿ ವಿಶ್ವಾಸ ಮತ ಸಾಬೀತಿಗೆ ಅವಕಾಶ ನೀಡಲಿ ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *