ವಿದ್ಯಾರ್ಥಿನಿ ಶಂಕಾಸ್ಪದ ಸಾವು ಪ್ರಕರಣ : ತನಿಖೆ ಚುರುಕುಗೊಳಿಸಿದ ಸಿಐಡಿ ತಂಡ

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಶಂಕಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಿಂದ ಬಂದಿರುವ ಸಿಐಡಿ ತಂಡ, ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳದ ಮಹಜರು ನಡೆಸಿತು.

ಬಳಿಕ ಕೃಷಿ ವಿಜ್ಞಾನ ವಿವಿ ಪ್ರವಾಸಿ ಮಂದಿರದಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಡಿವೈಎಸ್ಪಿ ಶೀಲವಂತ ಹೊಸಮನಿ ಹಾಗೂ ನೇತಾಜಿ ಠಾಣೆ ಪಿಎಸ್​ಐ ಪ್ರಕಾಶ ಜತೆ ಎರಡು ತಾಸು ಚರ್ಚೆ ನಡೆಸಿದ ಸಿಐಡಿ ಎಸ್ಪಿ ಎಸ್.ಡಿ.ಶರಣಪ್ಪ ನೇತೃತ್ವದ ತನಿಖಾ ತಂಡ, ಮಾಹಿತಿ ಪಡೆಯಿತು. ನಂತರ ವಿದ್ಯಾರ್ಥಿನಿ ಶವ ದೊರೆತ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು. ಅಲ್ಲಿದ್ದ ಗಿಡದ ಅಳತೆ ಪಡೆದರು, ಸುತ್ತಲಿನ ಪ್ರದೇಶವನ್ನು ಪರಿಶೀಲಿಸಿದರು.

ತನಿಖಾ ತಂಡದೊಂದಿಗೆ ಬೆಂಗಳೂರಿನಿಂದ ಬಂದಿದ್ದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳದ ಮಣ್ಣು ಸೇರಿ ಇತರ ವಸ್ತುಗಳ ಮಾದರಿ ಸಂಗ್ರಹಿಸಿದರು. ಸುತ್ತಲಿನ ಪ್ರದೇಶದ ಫೋಟೋಗಳನ್ನು ತೆಗೆದುಕೊಂಡರು. ತಂಡದ ಸದಸ್ಯರು 2-3 ದಿನಗಳ ಕಾಲ ನಗರದಲ್ಲೇ ಬೀಡುಬಿಟ್ಟು ಮೃತ ವಿದ್ಯಾರ್ಥಿನಿ ಪಾಲಕರು ಹಾಗೂ ಸ್ನೇಹಿತರ ಹೇಳಿಕೆಗಳನ್ನು ಪಡೆಯಲಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಲ್ಲ ಆಯಾಮ ಮತ್ತು ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಬಗ್ಗೆ ನಾಗರಿಕರೂ ಮಾಹಿತಿ ನೀಡಬಹುದು. ಮರಣೋತ್ತರ ಪರೀಕ್ಷೆ ಮತ್ತು ಎಫ್​ಎಸ್​ಎಲ್ ವರದಿ ಬಂದಿರುವ ಬಗ್ಗೆ ಮಾಹಿತಿಯಿಲ್ಲ.

| ಎಸ್.ಡಿ.ಶರಣಪ್ಪ ಸಿಐಡಿ ಎಸ್ಪಿ, ಬೆಂಗಳೂರು

ಸತ್ಯಶೋಧನಾ ವರದಿ

ವಿದ್ಯಾರ್ಥಿನಿ ಶಂಕಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಜನಶಕ್ತಿ ರಾಜ್ಯ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಹಲವು ಸಂಘಟನೆಗಳು ಭಾನುವಾರ ರಾಯಚೂರಿಗೆ ಭೇಟಿ ನೀಡಿ ಸತ್ಯಶೋಧನೆ ನಡೆಸಿದ್ದು, ಆ ವರದಿ ಬಿಡುಗಡೆ ಮಾಡಿದೆ. ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎನ್ನುವ ಬಗ್ಗೆ ಹೆಚ್ಚಿನ ಕುತೂಹಲ ಪ್ರದರ್ಶಿಸಲಾಗುತ್ತಿದೆ. ಜಾಲತಾಣಗಳಲ್ಲಿ ಊಹಾಪೋಹ ಸೇರಿದ ವೈಭವೀಕೃತ ಮಾಹಿತಿಯನ್ನು ಹರಿದು ಬಿಡುವ ಮೂಲಕ ನಿಜ ಸಂಗತಿ, ಚರ್ಚೆಯಾಗಬೇಕಾದ ವಿಷಯಗಳು ಹಿನ್ನೆಲೆಗೆ ಸರಿಯುತ್ತವೆ ಎಂದು ಸಂಘಟನೆಯ ವಿದ್ಯಾ ಪಾಟೀಲ್ ತಿಳಿಸಿದ್ದಾರೆ.