ಬಸ್‌ಪಾಸ್ ಉಚಿತವಾಗಿ ವಿತರಿಸಲು ಒತ್ತಡ

<ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ>

ರಾಯಚೂರು:  ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಉಚಿತವಾಗಿ ವಿತರಿಸಲು ಸರ್ಕಾರ ತುರ್ತಾಗಿ ಆದೇಶ ಹೊರಡಿಸುವಂತೆ ಆಗ್ರಹಿಸಿ ಎಐಡಿಎಸ್‌ಒ, ಎಐಡಿವೈಒ ಮತ್ತು ಎಐಎಂಎಸ್‌ಎಸ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಡಿಸಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಬಸ್‌ಪಾಸ್ ನಿರೀಕ್ಷೆಯಲ್ಲಿದ್ದಾರೆ. ಆದರೆ ಸಾರಿಗೆ ಇಲಾಖೆ ಅಧಿಕಾರಿಗಳು ಪೂರ್ಣ ಪ್ರಮಾಣದ ಬಸ್‌ಪಾಸ್‌ಗಾಗಿ ಹಣ ಸಂಗ್ರಹಿಸುವ ಆದೇಶ ಹೊರಡಿಸಿದ್ದು, ಗೊಂದಲ ಮೂಡಿಸಿದೆ. ಹಿಂದಿನ ಸರ್ಕಾರ 19.60 ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ಗಾಗಿ 836.98 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಆದರೆ ಸಾರಿಗೆ ಇಲಾಖೆ ಈ ಅನುದಾನ ಸಾಕಾಗುವುದಿಲ್ಲ ಹೆಚ್ಚುವರಿಯಾಗಿ 629.32 ಕೋಟಿ ರೂ. ಬಿಡುಗಡೆಗೆ ಕೋರಿದೆ. ವಿದ್ಯಾರ್ಥಿಗಳ ಬಸ್‌ಪಾಸ್‌ನಲ್ಲೂ ಸಾರಿಗೆ ಸಂಸ್ಥೆ ಲಾಭದ ಲೆಕ್ಕಾಚಾರ ಹಾಕುವುದು ಸರಿಯಲ್ಲ ಎಂದು ಆರೋಪಿಸಿದರು.

ಕೂಡಲೇ ಇಲಾಖೆಯಲ್ಲಿ ಆಗುತ್ತಿರುವ ಸೋರಿಕೆ, ಭ್ರಷ್ಟಾಚಾರ ತಡೆದು ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‌ಪಾಸ್ ವಿತರಣೆ ಮಾಡಬೇಕು. ವಿದ್ಯಾರ್ಥಿಗಳಿಂದ ಪಡೆದ ಹಣವನ್ನು ಹಿಂದುರಿಗಿಸಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಮಹೇಶ್ ಚಿಕಲಪರ್ವಿ, ಚನ್ನಬಸವ ಜಾನೇಕಲ್, ಚೇತನಾ ಬನಾರೆ, ಸಲೀಂ ಯುಸೂಫ್, ವೇಣೇಶ, ಅಪೂರ್ವ, ಬಿ.ಆಂಜನೇಯ, ಆರೀಫ್, ಸಬ್ಜದಲಿ, ಬಾಬು, ನಾಗರಾಜ, ವಿನೋದ, ಮಲ್ಲನಗೌಡ ಇದ್ದರು.

Leave a Reply

Your email address will not be published. Required fields are marked *