ಫುಟ್‌ಪಾತ್‌ನಲ್ಲಿ ಮಲಗಿದ ಯುವಕರು

<ಸೇನಾಭರ್ತಿ ರ‌್ಯಾಲಿಗೆ ಆಗಮಿಸಿದ ಆಕಾಂಕ್ಷಿಗಳು> ಛಳಿ, ದೂಳಿನ ನಡುವೆಯೇ ನಿದ್ದೆ>

ರಾಯಚೂರು: ನಗರದ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ ಸೇನಾಭರ್ತಿ ರ‌್ಯಾಲಿಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಯುವಕರು ವಸತಿ ಸಮಸ್ಯೆಯಿಂದಾಗಿ ಫುಟ್‌ಪಾತ್ ಮೇಲೆ ಮಲಗುವಂತಾಗಿದೆ. ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಯುವಕರು ಮುಂದಿನ ಹಂತದ ಸ್ಪರ್ಧೆಗಾಗಿ ವಸತಿ ಇರುವುದು ಅನಿವಾರ್ಯವಾಗಿದೆ. ಛಳಿ, ಧೂಳಿನಿಂದ ಕಂಗೆಟ್ಟಿರುವ ಯುವಕರು, ಅನಿವಾರ್ಯವಾಗಿ ವಿವಿ ಮುಂದೆ ಹಾದು ಹೋಗಿರುವ ರಾಜ್ಯ ಹೆದ್ದಾರಿ ಬದಿಯ ಫುಟ್‌ಪಾತ್ ಮೇಲೆ ಶಾಲು ಹೊದ್ದು, ಪೊಲೀಸರ ಬ್ಯಾರಿಕೇಡ್ ಹಾಕಿಕೊಂಡು ಅವುಗಳ ಮಧ್ಯೆ ಸೊಳ್ಳೆ ಕಾಟದಲ್ಲೇ ನಿದ್ದೆ ಮಾಡುತ್ತಿದ್ದಾರೆ.

ಒಂದಷ್ಟು ಅನುಕೂಲ: ಬೆಳಗಾವಿ ಸೇನಾ ವಿಭಾಗದಿಂದ ನಡೆಸಲಾಗುತ್ತಿರುವ ರ‌್ಯಾಲಿಯಲ್ಲಿ 12 ಜಿಲ್ಲೆಯ 34,492 ಯುವಕರು ನೋಂದಣಿ ಮಾಡಿಸಿದ್ದಾರೆ. ಅಭ್ಯರ್ಥಿಗಳಿಗೆ ಊಟ, ನೀರಿನ ಕೊರತೆಯಾಗಿಲ್ಲ. ಆದರೆ, ವಸತಿ ಸಮಸ್ಯೆ ತೀವ್ರವಾಗಿ ಕಾಡಿದೆ. ಪ್ರತಿದಿನ ನಾಲ್ಕೈದು ಸಾವಿರ ಯುವಕರು ರ‌್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿವಿ ಆವರಣದಲ್ಲೇ ಈಶ್ವರ ದೇವಸ್ಥಾನದ ಸಮಿತಿಯಿಂದ ಊಟ, ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ರೋಟರಿ ಕ್ಲಬ್‌ನವರೂ ಕುಡಿವ ನೀರು ಒದಗಿಸಿದ್ದಾರೆ. ಐದಾರು ವೈದ್ಯರು ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಯುವಕರಿಗೆ ಒಂದಷ್ಟು ಅನುಕೂಲ ಆಗಿದೆ.

ರಾಯಚೂರಿನ ಲಾಡ್ಜ್‌ಗಳಲ್ಲಿ ಕೊಠಡಿ ಪಡೆಯುವುದು ದುಬಾರಿ. ನಮ್ಮೂರಿಗೆ ಎರಡು ಬಾರಿ ಬಸ್ ಚಾರ್ಜ್ ಕೊಟ್ಟು ಬಂದಿದ್ದಕ್ಕಿಂತ ಜಾಸ್ತಿ ಇದೆ. ಮುಂದಿನ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸುವುದಕ್ಕಾಗಿ ರಸ್ತೆ ಪಕ್ಕದಲ್ಲಿಯೇ ಮಲಗಿದ್ದೇವೆ. ಅಧಿಕಾರಿಗಳು ವಸತಿ ವ್ಯವಸ್ಥೆ ಮಾಡಿದ್ದರೆ ಅನುಕೂಲವಾಗುತ್ತಿತ್ತು.
| ಹೆಸರು ಹೇಳಲಿಚ್ಛಿಸದ ಯುವಕರು