ರಾಯಚೂರು: ಜಾನಪದ ಪರಿಷತ್ತು ವತಿಯಿಂದ ಎರಡನೇ ಜಿಲ್ಲಾ ಜಾನಪದ ಸಮ್ಮೇಳನವನ್ನು ನ.10ರಂದು ದೇವದುರ್ಗ ಪಟ್ಟಣದ ಖೇಣದ್ ಮುರಿಗೆಪ್ಪ ಮಹಾವಿದ್ಯಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಶರಣಪ್ಪ ಆನೆಹೊಸೂರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಸಮ್ಮೇಳನ ಸರ್ವಾಧ್ಯಕ್ಷರನ್ನಾಗಿ ಜಾನಪದ ಸಂಘಟಕ ಹಾಗೂ ಶಿಕ್ಷಣ ಪ್ರೇಮಿ ಪ್ರಕಾಶ ಖೇಣದ್ ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ನಾಲ್ಕು ಗೋಷ್ಠಿಗಳು ನಡೆಯಲಿವೆ. ಜತೆಗೆ ಜಾನಪದ ಕಲೆಗಳ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಜಮ್ಮ ಜೋಗುತಿ, ಕಲಾವಿದರಾದ ಕರಿಬಸವ ತಡಕಲ್, ಜಿ.ಮಹನ್ಯ ಪಾಟೀಲ್, ತುಕಾಲಿ ಸಂತೋಷ್ ಪಾಲ್ಗೊಳ್ಳಲಿದ್ದು, ಹಲವು ಜಾನಪದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪರಿಷತ್ತಿನ ದೇವದುರ್ಗ ತಾಲೂಕಾಧ್ಯಕ್ಷ ಬಸವರಾಜ ಯಾಟಗಲ್ ಪ್ರಮುಖರಾದ ಡಾ.ಅರುಣಾ ಹಿರೆಮಠ, ವಿದ್ಯಾ ಮೃತ್ಯುಂಜಯ, ಬಸವರಾಜ ಸೇರಿದಂತೆ ಇತರರಿದ್ದರು.