ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಪ್ರತಿಭಟನೆ

ವಿಜಯಪುರ: ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ನಗರದ ಗಾಂಧಿ ವೃತ್ತದಲ್ಲಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಎಐಡಿಎಸ್‌ಒನ ಜಿಲ್ಲಾ ಸಂಚಾಲಕಿ ಶೋಭಾ ಯರಗುದ್ರಿ ಮಾತನಾಡಿ, ಮಹಿಳೆಯರ ಮೇಲೆ ನಡೆಯುವ ಈ ರೀತಿಯ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ವಿದ್ಯಾರ್ಥಿನಿಯ ಸಾವಿಗೆ ಕಾರಣರಾದವರಿಗೆ ನಿದರ್ಶನೀಯ ಶಿಕ್ಷೆ ವಿಧಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

ಎಐಡಿವೈಒ ಜಿಲ್ಲಾಧ್ಯಕ್ಷ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ರಾಯಚೂರಿನಲ್ಲಿ ನಡೆದ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದಾಗಿದೆ. ಇಂಥ ಪ್ರಕರಣಗಳು ನಡೆಯುತ್ತಿದ್ದರೂ ಸರ್ಕಾರ ನ್ಯಾಯಸಮ್ಮತ ತನಿಖೆ ನಡೆಸದೆ ಇರುವುದು ದುರಂತ ಸಂಗತಿ ಎಂದರು.

ಎಐಎಂಎಸ್‌ಎಸ್ ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡುಗುಳಿ ಮಾತನಾಡಿ, ಮಹಿಳೆಯರು ಸಮಾಜದಲ್ಲಿ ಬದುಕುವ ವಾತವರಣವಿಲ್ಲದಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ವಿದ್ಯಾರ್ಥಿನಿ ಸಾವಿನಲ್ಲಿ ಭಾಗಿಯಾಗಿರುವ ಎಲ್ಲ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

ಎಐಡಿವೈಒ ಜಿಲ್ಲಾ ಉಪಾಧ್ಯಕ್ಷ ಬಾಳು ಜೇವೂರ, ಎಐಎಂಎಸ್‌ಎಸ್‌ನ ಗೀತಾ.ಎಚ್, ಎಐಡಿವೈಒನ ಸುರೇಖಾ ಕಡಪಟ್ಟಿ, ಕಾವೇರಿ ರಜಪೂತ, ಲಕ್ಷ್ಮಿ ರಾಠೋಡ, ಪೂಜಾ ಬಳಗಾನೂರ, ಪೃಥ್ವಿ ಬಗಲಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರತಿಭಟನೆ ನಂತರ ನಿಯೋಗದಲ್ಲಿ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *