ಶತ್ರು ರಾಷ್ಟ್ರಕ್ಕಿಂತ ಮಹಾಘಟಬಂಧನ್ ಅಪಾಯಕಾರಿ – ಚಕ್ರವರ್ತಿ ಸೂಲಿಬೆಲೆ ಆತಂಕ

ರಾಯಚೂರು: ದೇಶದಲ್ಲಿ ಉದಯಿಸಿರುವ ಮಹಾಘಟಬಂಧನ್ ಶತ್ರು ರಾಷ್ಟ್ರಗಳಂತೆ ವರ್ತನೆ ಮಾಡುತ್ತಿರುವುದನ್ನು ಗಮನಿಸಿದರೆ ಪಾಕಿಸ್ತಾನವೂ ಅವರ ಜತೆ ಕೈಜೋಡಿಸಿದಂತಿದೆ ಎಂದು ಟೀಮ್ ಮೋದಿಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅನುಮಾನ ವ್ಯಕ್ತಪಡಿಸಿದರು.

ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಟೀಮ್ ಮೋದಿ ರಾಯಚೂರು ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರ 5 ವರ್ಷಗಳ ಪ್ರಮುಖ ಯೋಜನೆಗಳ ಪರಿಚಯ ಹಾಗೂ ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಕಾರ್ಯಕ್ರಮ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು. ಶತ್ರು ರಾಷ್ಟ್ರಗಳು ದೇಶದ ವಿರುದ್ಧ ಹೇಗೆ ನಡೆದುಕೊಳ್ಳುತ್ತಿವೆಯೋ ಆ ರೀತಿ ದೇಶದೊಳಗಿನ ಮಹಾಘಟಬಂಧನ್ ವರ್ತಿಸುತ್ತಿದೆ. ಅವರೊಟ್ಟಿಗೆ ಪಾಕಿಸ್ತಾನ ನಿಂತಿದೆ. ಅದು ಕಾಣುವುದಿಲ್ಲ ಅಷ್ಟೆ ಎಂದು ಲೇವಡಿ ಮಾಡಿದರು.

ಕಳೆದ ಐದು ವರ್ಷದಲ್ಲಿ ದೇಶವನ್ನು ಜಾಗತಿಕ ಮಟ್ಟದಲ್ಲಿ ನೋಡುವಂತೆ ಕಟ್ಟಿದ್ದು ಮೋದಿ, ಮನಮೋಹನ್ ಸಿಂಗ್ ಅಲ್ಲ. ಮೇಕ್ ಇನ್ ಇಂಡಿಯಾದಡಿ 6 ಸಬ್‌ಮೆರಿನ್ ನಿರ್ಮಿಸಿದ್ದಾರೆ. 72 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಮೇರಿಕಾದಿಂದ 7ಲಕ್ಷ ರೈಫೆಲ್ಸ್ ಖರೀದಿಸಿದ್ದಾರೆ. ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದಿನಕ್ಕೆ 12 ಕಿ.ಮೀ. ರಸ್ತೆ ಕಾಮಗಾರಿ ಆಗುತ್ತಿತ್ತು. ಆದರೆ ಈಗ 26 ಕಿ.ಮೀ. ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದರು.

ಅರುಣಾಚಲ ಪ್ರದೇಶದಲ್ಲಿ ಏರ್‌ಸ್ಟ್ರಿಪ್ ಮಾಡುವ ಮೂಲಕ ಚೀನಾಕ್ಕೂ ಎಚ್ಚರಿಕೆ ನೀಡಿದ್ದಾರೆ. ಶೇ.58 ಜನ ಬ್ಯಾಂಕ್‌ನಿಂದ ಹೊರಗುಳಿದವರನ್ನು ಗುರುತಿಸಿ ಉಚಿತ ಖಾತೆ ಮಾಡಿಸಿದ್ದಾರೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸುವ ಮೂಲಕ ಹಣ ಕೊಳ್ಳೆಹೊಡೆಯುತ್ತಿದ್ದವರನ್ನು ಮಟ್ಟ ಹಾಕಿದ್ದಾರೆ. ಇದರಿಂದ 2ಲಕ್ಷ ನಕಲಿ ಖಾತೆಗಳು, 3 ಲಕ್ಷ ನಕಲಿ ಕಂಪನಿಗಳು, 3 ಕೋಟಿ ಪಡಿತರ ಚೀಟಿ ಹಾಗೂ 3.50 ಕೋಟಿ ಅಕ್ರಮ ಗ್ಯಾಸ್ ಸಂಪರ್ಕಗಳನ್ನು ಕಡಿತಗೊಳಿಸಿದ್ದಾರೆ ಎಂದು ಹೇಳಿದರು.

ಮೋದಿ ಮತ್ತವರ ಸಂಪುಟದ ಸಂಸದರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಮಾಜಿ ಸೈನಿಕ ಸುಂದರ್ ಸಿಂಗ್, ಸಾರ್ವಜನಿಕರು, ಟೀಮ್ ಮೋದಿ ಸಂಚಾಲಕರು, ರಾಜಕೀಯ ಮುಖಂಡರು ಸೇರಿ ಇತರರಿದ್ದರು.

ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಂತೆ ಗಡಿ ಕಾಯುವ ಸೈನಿಕರಿಗೆ 2 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ ಹಾಗೂ ಹೆಲ್ಮೆಟ್ ಕೊಟ್ಟಿದ್ದಾರೆ. ಈ ಹಿಂದೆ 10 ವರ್ಷ ಆಡಳಿತ ಮಾಡಿದ ಕಾಂಗ್ರೆಸ್‌ನವರು ಯಾಕೆ ಮಾಡಲಿಲ್ಲ. ರಫೇಲ್ ಬಗ್ಗೆ ಮಾತನಾಡುವ ರಾಹುಲ್ ಗಾಂಧಿಯವರು ದೇಶಕ್ಕೆ ಒಂದು ರಫೇಲ್ ತರಲಿಲ್ಲ ಏಕೆ ?.
| ಚಕ್ರವರ್ತಿ ಸೂಲಿಬೆಲೆ, ಟೀಮ್ ಮೋದಿಯ ಸಂಸ್ಥಾಪಕ