ಕುಡಿವ ನೀರಿಗಾಗಿ ಮತದಾನ ಬಹಿಷ್ಕಾರದ ಎಚ್ಚರಿಕೆ – ಜಿಲ್ಲಾಧಿಕಾರಿಗೆ ಗ್ರಾಮಸ್ಥರ ಪತ್ರ

ರಾಯಚೂರು: ತಾಲೂಕಿನ ಕೃಷ್ಣಾ ನದಿ ಪಾತ್ರದ ಹಳ್ಳಿಗಳಿಗೆ ಕುಡಿವ ನೀರು ಒದಗಿಸಲು ವಿಫಲವಾದ ಅಧಿಕಾರಿಗಳ ಧೋರಣೆ ಖಂಡಿಸಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ವಿವಿಧ ಗ್ರಾಮಸ್ಥರು ತೀರ್ಮಾನಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ತಾಲೂಕಿನ ಯದ್ಲಾಪುರ ಗ್ರಾಪಂ ವ್ಯಾಪ್ತಿಯ ವಡ್ಲೂರು, ಚಿಕ್ಕ ವಡ್ಲೂರು, ಹನುಮಾನದೊಡ್ಡಿ ಗ್ರಾಮಸ್ಥರು ಸದಸ್ಯರ ಸಹಿ ಪಡೆದು, ಡಿಸಿ ಬಿ.ಶರತ್ ಅವರಿಗೆ ಮಾ.14ರಂದು ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆಯ ಪತ್ರ ರವಾನಿಸಿದ್ದಾರೆ. 2016-17ನೇ ಸಾಲಿನಲ್ಲಿ ಗ್ರಾಮಗಳನ್ನು ಬಹುಗ್ರಾಮ ಕುಡಿವ ನೀರು ಯೋಜನೆಯಡಿ ಆಯ್ಕೆ ಮಾಡಿ 45 ಲಕ್ಷ ರೂ. ಅನುದಾನ ನೀಡಲಾಗಿತ್ತು. ಬಹುತೇಕ ಕಾಮಗಾರಿ ಪೂರ್ಣಗೊಂಡರೂ ನೀರು ಪೂರೈಕೆಗೆ ಅಧಿಕಾರಿಗಳು ಮುಂದಾಗಿಲ್ಲ. ಇದರಿಂದ ಬೇಸಿಗೆಯಲ್ಲಿ ಜನ, ಜಾನವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಗರಸಭೆಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಫಲವತ್ತಾದ ಭೂಮಿ ನೀಡಿ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ನೀಡಿದ್ದೇವೆ. ನೀರಿನ ನಳಗಳನ್ನು ನಿರ್ಮಿಸಿಕೊಂಡು ಅದಕ್ಕೆ ಗ್ರಾಪಯಿಂದ ಕರ ಪಾವತಿಸುತ್ತಿದ್ದೇವೆ. ನೀರು ಮಾತ್ರ ಪೂರೈಕೆ ಆಗುತ್ತಿಲ್ಲ. 24/7 ಕಾಮಗಾರಿ ನೆಪದಲ್ಲಿ ಇದೀಗ ನೀರಿನ ಪೂರೈಕೆಗೆ ನಗರಸಭೆ ಪೌರಾಯುಕ್ತರು ಮನವಿ ಮಾಡಿದರೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ಸಮಸ್ಯೆಯಿಂದ 3-4 ಕಿ.ಮೀ. ದೂರ ಸೈಕಲ್, ಬೈಕ್ ಮೂಲಕ ನೀರು ತರುವಂತಾಗಿದೆ. ಕೆಲವರಂತೂ ಒತ್ತು ತರುವ ಸ್ಥಿತಿ ಇದೆ. ಜಿಲ್ಲಾ ಕೇಂದ್ರಕ್ಕೆ ಕೇವಲ 10 ಕಿ.ಮೀ. ವ್ಯಾಪ್ತಿಯ ನದಿ ಪಕ್ಕದ ಊರಲ್ಲಿಯೆ ಈ ಸಮಸ್ಯೆ ತಲೆದೋರಿದೆ. ಒಂದು ವಾರದೊಳಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಲೋಕಸಭೆ ಚುನಾವಣೆ ಮತದಾನವನ್ನು ಈ ಮೂರು ಗ್ರಾಮಗಳ ಜನ ಬಹಿಷ್ಕರಿಸುವುದಾಗಿ ಎಚ್ಚರಿಸಿದ ಪತ್ರವನ್ನು ಡಿಸಿಗೆ ನೀಡಿದ್ದಾರೆ.