ರಾಯಚೂರಲ್ಲಿ ನೀರಿಗಾಗಿ ಖಾಲಿಕೊಡ ಹಿಡಿದು ಅರಕಲಗುಡ್ಡ ಗ್ರಾಮಸ್ಥರ ಪ್ರತಿಭಟನೆ

ರಾಯಚೂರು: ದೇವದುರ್ಗ ತಾಲೂಕಿನ ಅರಕಲಗುಡ್ಡ ಗ್ರಾಮದಲ್ಲಿನ ಕುಡಿವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದಿಂದ ಸಂಘಟನೆ ನೇತೃತ್ವದಲ್ಲಿ ಬುಧವಾರ ಪ್ರಮುಖ ವೃತ್ತಗಳಲ್ಲಿ ಖಾಲಿ ಕೊಡಗಳನ್ನು ಹಿಡಿದು ಜಿಪಂ ಕಚೇರಿಗೆ ತಲುಪಿದರು. ನಂತರ ಸಿಇಒ ನಲಿನ್ ಅತುಲ್ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರವಾಗಿದ್ದರೂ ಸ್ಪಂದನೆ ಸಿಗುತ್ತಿಲ್ಲ. ಪರಿಹಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೆ ಕ್ರಮ ಕೈಗೊಂಡಿಲ್ಲ. ಸುಮಾರು 1500 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ 2 ಕೈ ಪಂಪ್‌ಗಳು ಬತ್ತಿ ಹೋಗಿದ್ದರಿಂದ ನೀರಿನ ಸಮಸ್ಯೆ ಉದ್ಭವಿಸಿದೆ.

ಕೂಡಲೆ ಕೊಳವೆಬಾವಿಗಳನ್ನು ಕೊರೆಯಿಸಿ ಕುಡಿವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬೇಕು. ಗ್ರಾಮದಲ್ಲಿ ಕೆರೆ ನಿರ್ಮಿಸಿ ನಾರಾಯಣಪುರ ಬಲದಂಡೆ ಕಾಲುವೆ ಸಂಪರ್ಕ ಕಲ್ಪಿಸಬೇಕು. ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕವಾದರೂ ನೀರು ಪೂರೈಕೆಗೆ ಸೂಚಿಸುವಂತೆ ಒತ್ತಾಯಿಸಿದರು. ನಿರ್ಲಕ್ಷೃ ಮುಂದುವರಿದರೆ ಕಚೇರಿ ಮುಂದೆ ನಿರಂತರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಸಂಘದ ಪದಾಧಿಕಾರಿಗಳಾದ ರಾಮಣ್ಣ, ಡಾ.ಚಂದ್ರಗಿರೀಶ, ಶರಣಪ್ಪ ಉದ್ಬಾಳ್, ಚನ್ನಬಸವ ಜಾನೇಕಲ್, ಎನ್. ಎಸ್.ವೀರೇಶ್, ದುರುಗಣ್ಣ, ಶರಣಪ್ಪ, ಜಮಾಲೂದ್ದೀನ್, ಹನುಮಂತರಾಯ, ಶಿವಪ್ಪ, ಅಮರೇಶ ದೊರೆ, ಮಲ್ಲಪ್ಪ ಬಡಿಗೇರ್, ಯಂಕೋಬ್, ಮಲ್ಲಮ್ಮ ಇತರರಿದ್ದರು.