ಅಂಗವಿಕಲರ ಕಲ್ಯಾಣಾಧಿಕಾರಿ ವಜಾಗೊಳಿಸಿ

ಹೈಕ ವಿಕಲಚೇತನರ ಹೋರಾಟ ಸಮಿತಿ ಒತ್ತಾಯ ಡಿಸಿ ಕಚೇರಿಗೆ ಮನವಿ

ರಾಯಚೂರು: ಜಿಲ್ಲೆಯ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಉಪನಿರ್ದೇಶಕರ ಹಾಗೂ ಕಂಪ್ಯೂಟರ್ ಆಪರೇಟರ್ ವಿರುದ್ಧ ಶಿಸ್ತು ಕ್ರಮಕೈಗೊಂಡು ಸೇವೆಯಿಂದ ವಜಾಗೊಳಿಸುವಂತೆ ಹೈಕ ವಿಕಲಚೇತನರ ಹೋರಾಟ ಸಮಿತಿ ಒತ್ತಾಯಿಸಿದೆ.

ನಗರದ ಡಿಸಿ ಕಚೇರಿಗೆ ಬುಧವಾರ ಸಂಘದ ನೇತೃತ್ವದಲ್ಲಿ ಆಗಮಿಸಿದ ಅಂಗವಿಕಲರು ಸ್ಥಾನಿಕ ಅಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಇಲಾಖೆ ಅಧಿಕಾರಿಯಾಗಿರುವ ಶ್ರೀದೇವಿ ನಿಡಗುಂದಿಯವರು ಅಂಗವಿಕಲರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿದ್ದಾರೆ. ಅಲ್ಲದೆ, ಸರ್ಕಾರ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ. ಅನುದಾನವನ್ನು ಮನಸೊ ಇಚ್ಛೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಮೇಲಧಿಕಾರಿಗಳಿಂದ ಅವ್ಯವಹಾರದ ಕಡತಗಳಿಗೆ ಸಹಿ ಮಾಡಿಸುವ ಮೂಲಕ ಮೋಸ ಮಾಡುತ್ತಿದ್ದಾರೆ. ಕಂಪ್ಯೂಟರ್ ಆಪರೇಟರ್ ಹುದ್ದೆಯನ್ನು ಅರ್ಹ ಅಂಗವಿಕಲರಿಗೆ ನೀಡದೆ ಹೊರಗುತ್ತಿಗೆಯಡಿ ರಮೇಶ ಎನ್ನುವವರನ್ನು ನೇಮಕ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಅವರು ರಾಜೀನಾಮೆ ಸಲ್ಲಿಸಿದ್ದರೂ, ಅನಧಿಕೃತವಾಗಿ ಅವರಿಂದ ಸೇವೆ ಪಡೆಯುವ ಮೂಲಕ ಕಾನೂನು ಉಲ್ಲಂಘಿಸುತ್ತಿದ್ದಾರೆ. ಅಂಗವಿಕಲರ ವಿರೋಧಿಯಾಗಿರುವ ಶ್ರೀದೇವಿ ಹಾಗೂ ರಮೇಶ ವಿರುದ್ಧ ಶಿಸ್ತು ಕ್ರಮ ಕೈಗೊಂಡು. ಅರ್ಹ ಅಂಗವಿಕಲರಿಗೆ ಕಂಪ್ಯೂಟರ್ ಆಪರೇಟರ್ ಹುದ್ದೆ ನೀಡಬೇಕು, ಸೇವೆಯಿಂದ ಆ ಇಬ್ಬರನ್ನು ವಜಾಗೊಳಿಸಿ ಅಂಗವಿಕಲರ ಬಗ್ಗೆ ಕಾಳಜಿ ಇರುವ ಅಧಿಕಾರಿಯನ್ನು ಆ ಸ್ಥಾನಕ್ಕೆ ನಿಯೋಜಿಸುವಂತೆ ಆಗ್ರಹಿಸಿದ್ದಾರೆ.

ಸಮಿತಿಯ ಅಧ್ಯಕ್ಷ ನಿಂಗನಗೌಡ ಕೆ. ಮಾಚನೂರು, ಅಬ್ದುಲ್ ಮಜೀದ್ ಮುದಗಲ್, ವೀರಭದ್ರ ಗೆಜ್ಜಲಗಟ್ಟಾ, ಚಾಂದ ಪಾಷಾ, ವೀರಸಂಗಯ್ಯ ಹಿರೇಮಠ, ಎಂ.ಡಿ.ಅನ್ವರ್ ರಾಯಚೂರು, ಸಿದ್ದನಗೌಡ, ಖಾಜಾಸಾಬ್, ಎಂ.ಡಿ ರಿಯಾಜ್, ಉಮಾಪತಿ ಇತರರಿದ್ದರು.

One Reply to “ಅಂಗವಿಕಲರ ಕಲ್ಯಾಣಾಧಿಕಾರಿ ವಜಾಗೊಳಿಸಿ”

  1. ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ರಾಯಚೂರು
    ಇಲ್ಲಿ ನಾನು ಒಂದು ಮನವಿಯನ್ನು ಮಾಡುವೆ.ಅಂಗವಿಕಲರಿಗೆ ಕೆಲಸ ಕೊಡಿ.

Comments are closed.