ಫೆ.18ರಂದು 1.96 ಲಕ್ಷ ಗಣ ಇಷ್ಟಲಿಂಗ ಪೂಜೆ

ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಹೇಳಿಕೆ | ವೀರಗೋಟ ಸುಕ್ಷೇತ್ರದಲ್ಲಿ ಕಾರ್ಯಕ್ರಮ

ರಾಯಚೂರು: ದೇವದುರ್ಗ ತಾಲೂಕಿನ ವೀರಗೋಟ ಸುಕ್ಷೇತ್ರದಲ್ಲಿ ಫೆ.15 ರಿಂದ 18ರವರೆಗೆ 1.96 ಲಕ್ಷ ಗಣ ಇಷ್ಟಲಿಂಗ ಪೂಜಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಹೋತ್ಸವ ಸಮಿತಿ ಮುಖಂಡ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಹೇಳಿದರು.

ಲೋಕ ಕಲ್ಯಾಣಕ್ಕಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಫೆ.15 ರಿಂದ 17ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.18ರಂದು 1.96 ಲಕ್ಷ ಜನರಿಂದ ಇಷ್ಟಲಿಂಗ ಪೂಜೆ ನೆರವೇರಲಿದೆ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

12ನೇ ಶತಮಾನದಲ್ಲಿ ಬಸವಣ್ಣನವರು 1.96 ಲಕ್ಷ ಜನರಿಂದ ಇಷ್ಟಲಿಂಗ ಪೂಜೆ ನೆರವೇರಿಸಿದ್ದು, 1969ರಲ್ಲಿ ವಿಜಯಪುರ ಜಿಲ್ಲೆಯ ಲಚ್ಯಾಣದಲ್ಲಿ ಸಂಗನಬಸವ ಶಿವಯೋಗಿಗಳು ನೇರವೇರಿಸಿದ್ದರು. ಕಾರ್ಯಕ್ರಮಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಪೂಜೆಗಾಗಿ 40 ಎಕರೆ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ವಾಹನ ನಿಲುಗಡೆಯಾಗಿ 200 ಎಕರೆ ಪ್ರದೇಶವನ್ನು ಸಮತಟ್ಟು ಮಾಡಲಾಗುತ್ತಿದೆ. ಜೊತೆಗೆ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಸಚಿವರು, ಶಾಸಕರ ನೇತೃತ್ವದಲ್ಲಿ ಸ್ವಾಗತ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳನ್ನು ನೇಮಕ ಮಾಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸ್ವಯಂ ಸೇವಕರು ಕಾರ್ಯನಿರ್ವಹಿಸಲು ಮುಂದೆ ಬಂದಿದ್ದಾರೆ ಎಂದು ಚಂದ್ರಶೇಖರ ಪಾಟೀಲ್ ಹೇಳಿದರು.

ವೀರಗೋಟನ ಆದಿಲಿಂಗ ಮೌನೇಶ್ವರ ಆಸನಕಟ್ಟಿ ಟ್ರಸ್ಟ್‌ನ ಅಡವಿಲಿಂಗ ಮಹಾರಾಜ್, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯರು, ಜಿಪಂ ಸದಸ್ಯ ವೀರಣ್ಣ ಪಾಣಿ, ಮುಖಂಡರಾದ ಎ.ಮಾರೆಪ್ಪ, ಬಸನಗೌಡ, ಮಲ್ಲಿಕಾರ್ಜುನ, ಬಸವರಾಜ ಹೇರುಂಡಿ ಇತರರಿದ್ದರು.

20 ಸ್ಟಾಲ್ ನಿರ್ಮಾಣ
ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಒಂದು ಲಕ್ಷ ಜನರಿಗೆ ಒಂದು ಸ್ಟಾಲ್‌ನಂತೆ ಒಟ್ಟು 20 ಸ್ಟಾಲ್ ನಿರ್ಮಿಸಲಾಗುವುದು. ಕುಡಿವ ನೀರು ಹಾಗೂ ರಾತ್ರಿ ತಂಗುವವರಿಗೂ ವ್ಯವಸ್ಥೆ ಕಲ್ಪಿಸಲಾಗುವುದು. ಪೂಜೆಯಲ್ಲಿ ಪಾಲ್ಗೊಳ್ಳುವವರಿಗೆ ಸಮಿತಿಯಿಂದ ಪೂಜಾ ಸಾಮಗ್ರಿ ಕಿಟ್ ವಿತರಿಸಲಾಗುವುದು. ಉಜ್ಜಯಿನಿ, ಕಾಶಿ, ಶ್ರೀಶೈಲ ಜಗದ್ಗುರುಗಳು ಸೇರಿ ರಾಜ್ಯದ ವಿವಿಧೆಡೆಯಿಂದ 600ಕ್ಕೂ ಹೆಚ್ಚು ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಹುಬ್ಬಳ್ಳಿಯ ಮೂರುಸಾವಿರ ಮಠ ಮತ್ತು ಕೊಪ್ಪಳ, ಸುತ್ತೂರು ಮಠದ ಸ್ವಾಮೀಜಿಗಳಿಗೂ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.