ಮೃತ, ಜೀವಂತ ಶಿಶುಗಳ ಅದಲು-ಬದಲು

<< ರಿಮ್ಸ್ ಆಸ್ಪತ್ರೆ ಸಿಬ್ಬಂದಿ ಯಡವಟ್ಟು >>

ರಾಯಚೂರು: ರಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಒಂದಿಲ್ಲೊಂದು ಯಡವಟ್ಟು ಮಾಡುತ್ತಲೇ ಇದ್ದು, ಈಗ ಮೃತ ನವಜಾತ ಶಿಶುವನ್ನು ಬೇರೆ ಶಿಶುವಿನ ತಂದೆ-ತಾಯಿಗೆ ಕೊಟ್ಟು ಕಳಿಸುವ ಮೂಲಕ ಮತ್ತೊಂದು ಪ್ರಮಾದ ಮೈ ಮೇಲೆ ಎಳೆದುಕೊಂಡಿದೆ.

ಮಕ್ಕಳ ವಿಭಾಗದ ಎನ್‌ಐಸಿಯು ವಿಭಾಗದ ಸಿಬ್ಬಂದಿ ಈ ಸಲದ ಗೊಂದಲಕ್ಕೆ ಕಾರಣವಾಗಿದ್ದಾರೆ. ತಮ್ಮ ಶಿಶು ಬದುಕಿದ್ದರೂ ಮೃತಪಟ್ಟ ಶಿಶುವನ್ನು ಕೊಟ್ಟು ಕಳಿಸಿದ್ದಕ್ಕೆ ಪಾಲಕರು, ಬಂಧುಗಳು ಆಸ್ಪತ್ರೆಗೆ ಧಾವಿಸಿ, ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಡೆದದ್ದೇನು?: ಎನ್‌ಐಸಿಯು ವಿಭಾಗದಲ್ಲಿ ಫಿಟ್ಸ್‌ಗೆ ಚಿಕಿತ್ಸೆ ಪಡೆಯಲು ನವಜಾತ ಗಂಡು ಶಿಶು ಮತ್ತು ಕಡಿಮೆ ತೂಕ ಎದುರಿಸುತ್ತಿರುವ ನವಜಾತ ಹೆಣ್ಣ ಶಿಶುವನ್ನು ದಾಖಲಿಸಲಾಗಿತ್ತು. ಎರಡೂ ಶಿಶುಗಳ ತಾಯಂದಿರ ಹೆಸರು ಒಂದೇ ಇದೆ. ಆದರೆ, ತಂದೆಯವರ ಹೆಸರು ಬೇರೆ ಬೇರೆ ಇದೆ. ಜ.29ರ ತಡರಾತ್ರಿ ಫಿಟ್ಸ್‌ನಿಂದ ಬಳಲುತ್ತಿದ್ದ ಗಂಡು ಶಿಶು ಮೃತಪಟ್ಟಿದೆ. ಸಿಬ್ಬಂದಿ ಆ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಹೆಣ್ಣು ಶಿಶುವಿನ ಪಾಲಕರಿಗೆ ಹಸ್ತಾಂತರಿಸಿದ್ದಾರೆ. ಮೃತ ಶಿಶುವಿನ ಕಳೇಬರವನ್ನು ದುಃಖದಲ್ಲೇ ತಾಲೂಕಿನ ಮಿರ್ಜಾಪುರ ಗ್ರಾಮಕ್ಕೆ ತೆಗೆದುಕೊಂಡು ಹೋಗಿ, ಸಂಸ್ಕಾರಕ್ಕೆ ಮುಂದಾದಾಗ ತಮ್ಮ ಬಳಿ ಇರುವುದು ಗಂಡು ಶಿಶುವಿನ ಶವ ಎಂದು ಗೊತ್ತಾಗಿದೆ. ತಕ್ಷಣವೇ ಆಸ್ಪತ್ರೆಗೆ ಧಾವಿಸಿದ ಪಾಲಕರು, ಸಂಬಂಧಿಕರು ರಿಮ್ಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಯರಗೇರಾ ಪೊಲೀಸರ ಗಮನಕ್ಕೂ ತಂದಿದ್ದಾರೆ.

ಇದು ಆಚಾತುರ್ಯದಿಂದ ನಡೆದ ಘಟನೆ ಎಂದು ತಿಪ್ಪೆ ಸಾರಿಸಿರುವ ರಿಮ್ಸ್ ಅಧೀಕ್ಷಕರು, ತಪ್ಪು ಮಾಡಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ಆದರೆ, ರಿಮ್ಸ್ ಸಿಬ್ಬಂದಿಯಿಂದಾದ ಈ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ ಎಂಬುದು ಪಾಲಕರ ಆರೋಪ.