ಮೊಟ್ಟೆಯಲ್ಲಿ ಹುಳು ಪ್ರಕರಣ – ಡಿಡಿ, ಸಿಡಿಪಿಒ ಅಮಾನತು ಮಾಡಲು ಎಡಿಸಿಗೆ ಡಾ.ಅಂಬೇಡ್ಕರ್ ಸೇನೆ ಮನವಿ

ರಾಯಚೂರು: ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಡಿಡಿ ಹಾಗೂ ಸ್ಥಳೀಯ ಸಿಡಿಪಿಒ ನಿರ್ಲಕ್ಷದಿಂದ ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಮಟ್ಟದ ಮೊಟ್ಟೆ ಪೂರೈಕೆ ಆಗುತ್ತಿದ್ದು, ಕೂಡಲೇ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಡಾ.ಅಂಬೇಡ್ಕರ್ ಸೇನೆ ಮುಖಂಡರು ಶನಿವಾರ ಎಡಿಸಿ ವೆಂಕಟೇಶ್‌ಗೆ ಮನವಿ ಸಲ್ಲಿಸಿದರು.

ಇತ್ತೀಚೆಗೆ ಅಶೋಕ ಡಿಪೋ ಬಳಿಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ವಿತರಿಸುವ ಮೊಟ್ಟೆಯಲ್ಲಿ ಹುಳುಗಳು ಕಂಡು ಬಂದಿವೆ. ಜಿಲ್ಲಾ ಕೇಂದ್ರದಲ್ಲೇ ಸಮಸ್ಯೆ ಪತ್ತೆ ಹಚ್ಚಿ ಕ್ರಮ ಜರುಗಿಸದ ಡಿಡಿ ಹಾಗೂ ಸಿಡಿಪಿಒ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಅಂಗನವಾಡಿ ಕಾರ್ಯಕರ್ತೆ ಕೇಂದ್ರದಲ್ಲೇ ಬೇಯಿಸಿದ ಮೊಟ್ಟೆ ವಿತರಿಸಬೇಕು. ಸಿಡಿಪಿಒ ಕುಮ್ಮಕ್ಕಿನಿಂದಾಗಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಈ ಕುರಿತು ಗಮನ ಹರಿಸದ ಅಧಿಕಾರಿಗಳು ಹಾಗೂ ಮೊಟ್ಟೆ ಪೂರೈಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಎಡಿಸಿ ವೆಂಕಟೇಶ ಮಾತನಾಡಿ, ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲಿಸಿ, ವಾಸ್ತವ ಮಾಹಿತಿ ಪಡೆದು ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಸೇನೆ ಅಧ್ಯಕ್ಷ ವಿಶ್ವನಾಥ ಪಟ್ಟಿ, ಸಂಚಾಲಕರಾದ ವೆಂಕಟೇಶ ದಿನ್ನಿ, ಮಹೇಶ ಕುಮಾರ, ನಗರಾಧ್ಯಕ್ಷ ಕೆ.ಸಂತೋಷ, ಎಂ.ಡಿ.ರಫಿ, ಚಂದ್ರಶೇಖರ ಪೂರತಿಪ್ಲಿ, ರವಿಚಂದ್ರ, ಉಮೇಶ, ನಾಗರಾಜ, ಎಂ.ಡಿ.ಜಾಕೀರ್, ಹುಸೇನ ಬಾಷಾ, ವೀರಭದ್ರ, ಶಿವರಾಜ ಇತರರಿದ್ದರು.