ಮಾ.10ರಂದು ರಾಯಚೂರಲ್ಲಿ ದಮನಿತರ ಹಕ್ಕೊತ್ತಾಯದ ರಾಜ್ಯ ಸಮಾವೇಶ -ಕೆ.ಎಲ್.ಅಶೋಕ

ರಾಯಚೂರು: ಮಾ.10ರಂದು ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಹಕ್ಕೊತ್ತಾಯ ರಾಜ್ಯ ಮಟ್ಟದ ಸಮಾವೇಶವನ್ನು ನಗರದ ಮಹಿಳಾ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಉಳಿವಿಗಾಗಿ ಕರ್ನಾಟಕದ ರಾಜ್ಯ ಸಮಿತಿ ಸದಸ್ಯ ಕೆ.ಎಲ್.ಅಶೋಕ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ದೇಶಕ್ಕಾಗಿ ನಾವು ಎನ್ನುವ ಆಂದೋಲನದ ಭಾಗವಾಗಿ ಜನ ಜಾಗೃತಿ ಜತೆಗೆ ಸಮಾಜದಲ್ಲಿನ ದಮನಿತರ ಬೇಡಿಕೆಗಳಿಗೆ ಪ್ರಣಾಳಿಕೆಯಲ್ಲಿ ಖಚಿತ ಭರವಸೆ ನೀಡುವವರಿಗೆ ನಮ್ಮ ಮತ ನೀಡುವಂತೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಮಾ.10ರ ಸಮಾವೇಶದಲ್ಲಿ ಗುಜರಾತಿನ ಶಾಸಕ ಜಿಗ್ನೇಶ್ ಮೇವಾನಿ, ರಾಜೀವಗಾಂಧಿ ವಿವಿಯ ಸಂಶೋಧನಾ ವಿದ್ಯಾರ್ಥಿ ಉಮಾರ್ ಖಾಲೀದ್ ಸೇರಿದಂತೆ ರಾಜ್ಯದ ಹಲವು ಹೋರಾಟಗಾರರು ಭಾಗವಹಿಸುವರು.

ಸರ್ಕಾರಗಳೆ ಒಪ್ಪಿಕೊಂಡಿರುವ ಸಾಚಾರ್ ಸಮಿತಿ ವರದಿ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ, ಕೃಷಿ ಬಿಕ್ಕಟ್ಟು, ಶೈಕ್ಷಣಿಕ ಸಮಸ್ಯೆಯಿಂದ ಅಭದ್ರತೆ, ಉದ್ಯೋಗದ ಸವಾಲು, ಕೋಮುವಾದಿತನದ ದ್ವೇಷದಿಂದ ಹಲ್ಲೆಗಳು ಹೀಗೆ ಹತ್ತಾರು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಜನರ ಹಕ್ಕೊತ್ತಾಯಗಳೆ ಎಲ್ಲ ಪಕ್ಷಗಳಿಗೆ ಮಾನದಂಡ ಆಗಲು ಈ ಹೋರಾಟ ನಡೆಯುತ್ತಿದೆ. ಪ್ರಗತಿಪರ ಚಿಂತನೆಗಳನ್ನೊಳಗೊಂಡ ಹತ್ತಾರು ಸಂಘಟನೆಗಳು ಕೈಜೋಡಿಸಿವೆ. ಮಾ.30ರ ನಂತರ ಧಾರವಾಡದಲ್ಲಿ ನಡೆಯುವ ಸಮ್ಮೇಳನದಲ್ಲಿ ಈ ರಾಜ್ಯದಲ್ಲಿ ಯಾರನ್ನು ಜನ ಬೆಂಬಲಿಸಬೇಕು, ಯಾಕೆ ಬೆಂಬಲಿಸಬೇಕು ಎನ್ನುವ ಸಮರ್ಥನೆಯೊಂದಿಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ನಟ, ಪ್ರಗತಿ ಪರ ಚಿಂತಕ ಪ್ರಕಾಶ ರೈ ಚುನಾವಣೆಗೆ ಸ್ಪರ್ಧಿಸಿದರೆ ಆ ಕ್ಷೇತ್ರದಲ್ಲಿ ಸಂಘ ಬೆಂಬಲಿಸಲಿದೆ. ಅದರಂತೆ ಹಲವು ಪ್ರಗತಿಪರರು ಸ್ಪರ್ಧಿಸಿದರೆ ಬೆಂಬಲಿಸುವ ಬಗ್ಗೆ ಎಲ್ಲ ಸಂಘಟನೆಗಳು ಸೇರಿ ಒಮ್ಮತದ ನಿರ್ಣಯ ಮಾಡುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳಾದ ಚಾಮರಸ ಮಾಲಿಪಾಟೀಲ್, ಟಿ.ಜಾನ್ ವೆಸ್ಲಿ, ಕುಮಾರ ಸಮತಳ, ಅಂಬಣ್ಣ ಅರೋಲಿ, ಬಸವರಾಜ್ ಇತರರಿದ್ದರು.