ಬಟ್ಟೆ ಅಂಗಡಿಯವರಿಗೆ ದಂಡದ ಬಿಸಿ
ರಾಯಚೂರು: ಎರಡು ದಿನಗಳ ವಾರಾಂತ್ಯ ಕರ್ಫ್ಯೂ ಮುಗಿದ ಖುಷಿಯಲ್ಲಿ ಜನರು ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದು ಕಂಡು ಬಂದಿದ್ದು, ವಾಣಿಜ್ಯ ಕೇಂದ್ರಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತಲ್ಲದೆ ರಸ್ತೆಗಳಲ್ಲಿ ವಾಹನ ಸಂಚಾರ ಅಧಿಕವಾಗಿ ಕಂಡು ಬಂತು.
ವಾರಾಂತ್ಯ ಕರ್ಫ್ಯೂಗೆ ಸ್ಪಂದನೆ ನೀಡಿದ್ದ ಜನ ಕರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಖರೀದಿಯಲ್ಲಿ ತೋಡಗಿದ್ದರು. ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ವ್ಯಾಪಾರಿಗಳು ವಿನಂತಿಸಿದರೂ ಜನ ಬೆಲೆ ನೀಡಲಿಲ್ಲ. ವಾಹನ ಸಂಚಾರ ಅಧಿಕವಾಗಿತ್ತು. ಮಧ್ಯಾಹ್ನದ ವರೆಗೆ ಖರೀದಿಗೆ ಅವಕಾಶವಿದ್ದ ಕಾರಣ ಜನ ಖರೀದಿಗೆ ಮುಗಿಬಿದ್ದಿದ್ದು ಕಂಡು ಬಂತು.
ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದ್ದ ಪೊಲೀಸರು, ಮಾಸ್ಕ್ ಧರಿಸದ ವಾಹನ ಸವಾರರಿಗೆ ದಂಡ ವಿಧಿಸುವುದನ್ನು ಮುಂದುವರಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರ ಓಡಾಡುವುದು ಸಾಮಾನ್ಯವಾಗಿತ್ತು. ಕರೊನಾ ಮುನ್ನೆಚ್ಚರಿಕೆ ವಹಿಸಿದ್ದು ಕಂಡು ಬರಲಿಲ್ಲ.
ಅಂಗಡಿ ಮಾಲೀಕರಿಗೆ ದಂಡ: ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಅವಕಾಶ ನೀಡಿದ್ದರೂ ಬಹುತೇಕ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ತೆರೆದು ವಹಿವಾಟು ನಡೆಸಿದರು. ನಗರ ಮಹಾವೀರ ವೃತ್ತ, ಚಂದ್ರಮೌಳೇಶ್ವರ, ಬಟ್ಟೆ ಬಜಾರ ಸೇರಿ ಅನೇಕ ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಬಟ್ಟೆ ವ್ಯಾಪಾರ ನಡೆಯಿತು. ನಿಗದಿಯಾದ ಮದುವೆ, ರಮಜಾನ್ ಹಬ್ಬದ ನಿಮಿತ್ತ ನೂರಾರು ಜನರು ಬಟ್ಟೆ ವ್ಯಾಪಾರದಲ್ಲಿ ತೊಡಗಿದ್ದರು. ನಗರಸಭೆ ಪೌರಾಯುಕ್ತ ವೆಂಕಟೇಶ ನೇತೃತ್ವದಲ್ಲಿ ಅಧಿಕಾರಿಗಳು ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ, ಮಾಲೀಕರಿಗೆ ದಂಡ ವಿಧಿಸಿ ಅಂಗಡಿಗಳನ್ನು ಮುಚ್ಚಿಸಿದರು. ಮೊಂಡುತನ ತೋರಿಸುತ್ತಿದ್ದವರಿಗೆ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ ನೀಡಿದರು.