ರಾಯಚೂರು: ಮಾನ್ವಿ ತಾಲೂಕಿನ ಅಮರೇಶ್ವರ ಕ್ಯಾಂಪಿನ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದಿಂದ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸಂಘದ ಸದಸ್ಯ ಎಂ.ಪ್ರಕಾಶ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, 1987ರಿಂದ ಅಮರೇಶ್ವರ ಕ್ಯಾಂಪಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಚುನಾವಣೆಯಲ್ಲಿ ನೈಜ ಹಾಲು ಉತ್ಪಾದಕರನ್ನು ಬಿಟ್ಟು, ಹೈನು ಇಲ್ಲದವರನ್ನು ಸದಸ್ಯರನ್ನಾಗಿ ನೇಮಿಸಲಾಗುತ್ತಿದ್ದು, ಇದರಿಂದ ಚುನಾವಣೆಯಲ್ಲಿ ಲೋಪಗಳು ಕಂಡುಬರುತ್ತಿವೆ. ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಇದರಿಂದ ದ್ರೋಹ ಬಗೆಯಲಾಗುತ್ತಿದೆ ಎಂದರು.
2019-20 ನೇ ಸಾಲಿನ ಚುನಾವಣೆಯಲ್ಲಿ ನಿಜವಾಗಿ ಹಾಲು ಹಾಕಿದವರು 13 ಜನ ರೈತರು ಮಾತ್ರ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದರು. 2024-25 ನೇ ಸಾಲಿನಲ್ಲಿ ಸುಳ್ಳು ದಾಖಲೆ ಸೃಷ್ಠಿಸಿ ಹೈನು ಇಲ್ಲದವರಿಗೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿದೆ. ಪ್ರಸ್ತುತ 108ಜನರು ಹಾಲು ಹಾಕುತ್ತಿದ್ದಾರೆಂಬ ವರದಿ ನಿಡಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಶಿವಾರ್ಜುನ, ಸಂಗಮೇಶ, ವೀರೇಶ ಸೇರಿದಂತೆ ಇತರರಿದ್ದರು.