ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹಿರಿಯರ ಮುಂದೆ ಕಿರಿಯರಿಗೆ ಬಡ್ತಿ

ವೆಂಕಟೇಶ ಹೂಗಾರ

ರಾಯಚೂರು: ಸಂವಿಧಾನದ 371ನೇ (ಜೆ) ಕಾಯ್ದೆಯಲ್ಲಿನ ತೊಡಕಿನಿಂದಾಗಿ ಹೈದರಾಬಾದ್ ಕರ್ನಾಟಕದ ಪ್ರೌಢಶಾಲೆ ಸಹ ಶಿಕ್ಷಕರಿಗೆ ಮುಖ್ಯಶಿಕ್ಷಕರಾಗುವ ಅವಕಾಶ-ಅರ್ಹತೆ ಇದ್ದರೂ ವಂಚಿತರಾಗಿದ್ದಾರೆ. ಹೈಕ ವೃಂದ ರಚನೆ ಹಾಗೂ ಬಡ್ತಿ ನಿಯಮಗಳಲ್ಲಿನ ದೋಷದಿಂದಾಗಿ ಈ ಸಮಸ್ಯೆ ಎದುರಾಗಿದೆ.

ಈ ಭಾಗದ ಪ್ರೌಢಶಾಲೆಯಲ್ಲಿ 6,700 ಸ್ಥಳೀಯ ಸಹ ಶಿಕ್ಷಕರು ಮತ್ತು 3,600 ಸ್ಥಳೀಯರಲ್ಲದ ಶಿಕ್ಷಕರು ಸೇವೆಯಲ್ಲಿದ್ದಾರೆ. ಬಡ್ತಿಗೆ ಅರ್ಹರಿರುವ ಹೈಕ ಪ್ರಾಂತದ ಸಹ ಶಿಕ್ಷಕರ ಸಂಖ್ಯೆಗೆ ಹೋಲಿಸಿದರೆ ಹುದ್ದೆಗಳ ಪ್ರಮಾಣ ಕಡಿಮೆ. ಆದರೆ, ಹೈಕಯೇತರ ಸಹ ಶಿಕ್ಷಕರ ಸಂಖ್ಯೆಗಿಂತ ಬಡ್ತಿ ಹುದ್ದೆಗಳು ಹೆಚ್ಚು ಇವೆ. ಈ ಕಾರಣದಿಂದ ಹೈಕಯೇತರರು ಹೆಚ್ಚೆಚ್ಚು ಬಡ್ತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕಾಯ್ದೆ ಪ್ರಕಾರ ಒಟ್ಟು ಹುದ್ದೆಗಳಲ್ಲಿ ಶೇ. 80 ಹೈಕ ಪ್ರಾಂತದವರಿಗೆ ಹಾಗೂ ಶೇ. 20 ಹೈಕಯೇತರರು ಎನ್ನುವ ಬದಲು ಸಾಮಾನ್ಯ ಎಂದು ನಿಯಮಾವಳಿಯಲ್ಲಿ ಸ್ಪಷ್ಟಪಡಿಸಿದ್ದರೆ ಹೈಕದ ಸೇವಾ ಹಿರಿತನ ಹೊಂದಿದ ಸಹ ಶಿಕ್ಷಕರು ಸಾಮಾನ್ಯ ಹುದ್ದೆಗಳಲ್ಲೂ ಬಡ್ತಿ ಅವಕಾಶ ಪಡೆಯುತ್ತಿದ್ದರು.

ಹೈಕ ಭಾಗದಲ್ಲಿ 340 ಮುಖ್ಯಶಿಕ್ಷಕರ ಹುದ್ದೆ ಖಾಲಿ ಇದೆ. ಇವು 1997ರಿಂದ ಭರ್ತಿ ಮಾಡಿಲ್ಲ. ಇದೀಗ 371(ಜೆ) ಕಾಯ್ದೆ ನಿಯಮದಂತೆ ಹಂಚಿಕೆ ಮಾಡಿದರೆ 68 ಹುದ್ದೆಗಳು ಹೈಕ ಹೊರತಾದವರಿಗೆ ದೊರೆಯುತ್ತದೆ. ಉಳಿದ 272 ಹುದ್ದೆಗಳು ಹೈಕ ಭಾಗದ ವರಿಗೆ ದೊರೆಯುತ್ತದೆ. ಆದರೆ ಹೈಕ ಭಾಗದಲ್ಲಿ ಬಡ್ತಿಗೆ ಅರ್ಹತೆ ಪಡೆದವರ ಸಹ ಶಿಕ್ಷಕರ ಸಂಖ್ಯೆಯೇ 800 ಇದೆ. ನಂತರ ಅರ್ಹತೆ ಇದ್ದರೂ ಉಳಿದ 538 ಸಹ ಶಿಕ್ಷಕರೂ ವಂಚಿತರಾಗುತ್ತಾರೆ. ಹೀಗಾಗಿ 538 ಶಿಕ್ಷಕರು ಸ್ಥಳೀಯರಲ್ಲದ ಮತ್ತು ಕಿರಿಯರ ಕೆಳಗೆ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಬೇಕಿದೆ. ಹೈಕಯೇತರ 68 ಹುದ್ದೆಗಳಿಗೆ ಅರ್ಹತೆ ಪಡೆದವರ ಸಂಖ್ಯೆ 110 ಇದೆ.

ಆದೇಶ ರವಾನೆ: ಹೈಕ ಭಾಗದ ಶಿಕ್ಷಕರಿಗೆ ಅನ್ಯಾಯ ವಾಗುತ್ತಿದ್ದು, ಇದು ಸರಿಹೋಗುವವರೆಗೂ ಯಾವುದೆ ಬಡ್ತಿ ನೀಡಬಾರದೆಂದು ದೂರು ಸಲ್ಲಿಕೆಯಾಗಿ ವರ್ಷ ಕಳೆದ ನಂತರ ಕೊನೆಗೂ ಎಚ್ಚೆತ್ತುಕೊಳ್ಳಲಾಗಿದೆ. ಇದರ ಪರಿಣಾಮ ಹೈಕ ಭಾಗದಲ್ಲಿ ಯಾವುದೇ ಬಡ್ತಿ ತಡೆ ಹಿಡಿಯುವಂತೆ ಮಾ.21ರಂದು ಕಲಬುರಗಿ ಆಯುಕ್ತಗೆ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ವಿ.ಟಿ. ರಾಜಶ್ರೀ ಆದೇಶಿಸಿದ್ದಾರೆ.

ಸಮಿತಿ ರಚನೆ : 2018ರ ಫೆ. 23ರಂದು ನಡೆದ ಸಭೆಯಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಝಾ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮತ್ತು ಸಂಸದಿಯ ವ್ಯವಹಾರಗಳ ಹಾಗೂ ಶಾಸನ ರಚನೆ ಇಲಾಖೆ ಕಾರ್ಯದರ್ಶಿ ದ್ವಾರಕನಾಥ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಲಾಗಿದೆ. ಸ್ಥಳೀಯ ವೃಂದ ಆಯ್ಕೆ ಮಾಡಿಕೊಂಡ ಸಹ ಶಿಕ್ಷಕರಿಗೆ ಬಡ್ತಿ ನೀಡುವಾಗ ಸ್ಥಳಿಯೇತರ ನೌಕರರಿಗಿಂತ ಜ್ಯೇಷ್ಠತೆಯಲ್ಲಿ ಅನ್ಯಾಯವಾಗುವ ಬಗ್ಗೆ ಪರಿಶೀಲನೆ, ಅನುಚ್ಛೇದ 371 (ಜೆ) ಪ್ರಕಾರ ಅನನುಕೂಲಕ್ಕೆ ಒಳಗಾದ ವ್ಯಕ್ತಿಗಳ ಸಂಖ್ಯೆ, ಅರ್ಹತೆ ಪಡೆದ ಸ್ಥಳೀಯ-ಸ್ಥಳೀಯೇತರ ಮಾಹಿತಿ, ಪ್ರಸ್ತುತ ಕಾನೂನಿನಲ್ಲಿ ಇರುವ ಲೋಪದೋಷಗಳು, ಈ ಕುರಿತಾಗಿ ದಾಖಲಾದ ದೂರುಗಳು, ಬಡ್ತಿ ಪಡೆದವರ ಸಂಖ್ಯೆ, 10 ವರ್ಷಗಳ ಕಾಲ ಹೈಕದಲ್ಲಿ ವಾಸ ಇರುವ ಹೊರಗಿನವರಿಗೆ ಸ್ಥಳೀಯ ಎಂದು ಪರಿಗಣಿಸಿರುವ ಕುರಿತಾಗಿ ಮಾಹಿತಿಗಳ ವರದಿಯನ್ನು ಶೀಘ್ರ ನೀಡುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಆರ್. ಕಿಶೋರಿ ಸೂಚಿಸಿದ್ದಾರೆ.

ಸ್ಥಳೀಯರಲ್ಲದ ಮತ್ತು ಏಳೆಂಟು ವರ್ಷ ಸೇವೆ ಸಲ್ಲಿಸಿದವರಿಗೆ ಕಾಯ್ದೆಯಂತೆ ಬಡ್ತಿ ನೀಡುವುದಾದರೆ ಸ್ಥಳೀಯ ವೃಂದ ಸಹ ಶಿಕ್ಷಕರಿಗೂ ನ್ಯಾಯ ಸಿಗಬೇಕಿತ್ತು. ಹೈಕದಿಂದ ಹೊರಗಡೆ ಎಷ್ಟು ಜನ ನಮ್ಮವರಿಗೆ ಬಡ್ತಿ ನೀಡಲಾಗಿದೆ? ಕಾನೂನು ಈ ಭಾಗದಲ್ಲಿ ಮಾತ್ರ ಅನುಷ್ಠಾನ ಆಗಿರುವುದರಿಂದಲೇ ಅರ್ಹರಿದ್ದರೂ ಸಹ ಶಿಕ್ಷಕರು ಮುಖ್ಯಶಿಕ್ಷಕ ಹುದ್ದೆಯಿಂದ ವಂಚಿತರಾಗಿದ್ದಾರೆ.
– ವಿಶ್ವನಾಥರೆಡ್ಡಿ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ, ರಾಯಚೂರು

ಕಿರಿಯರ ಮುಂದೆ ಹಿರಿತನವಿದ್ದರೂ ಕಾಯ್ದೆಯಲ್ಲಿನ ಲೋಪದಿಂದಾಗಿ ಸಹ ಶಿಕ್ಷಕರಾಗೇ ಇರುವಂತಾಗಿದೆ. ಈ ಕುರಿತು ಕಳೆದ ವರ್ಷ ಸಲ್ಲಿಕೆಯಾಗಿದ್ದ ದೂರಿನ ಹಿನ್ನೆಲೆಯಲ್ಲಿ ಈಚೆಗೆ ಸಚಿವ ಸಂಪುಟ ಉಪಸಮಿತಿ ಉನ್ನತಾಧಿಕಾರಿಗಳ ನೇತೃತ್ವದಲ್ಲಿ ರಚನೆಯಾಗಿದೆ. ವಾಸ್ತವ ತಿಳಿದು ಸರ್ಕಾರಕ್ಕೆ ಶೀಘ್ರವೇ ಸಮಿತಿ ವರದಿ ನೀಡಬೇಕು. ವರದಿ ಆಧರಿಸಿ ಲೋಪಗಳನ್ನು ಸರಿಪಡಿಸಬೇಕು.
– ಡಾ. ರಜಾಕ್ ಉಸ್ತಾದ್ ಹೈಕ ಹೋರಾಟ ಸಮಿತಿ ಉಪಾಧ್ಯಕ್ಷ