ಕಾಂಗ್ರೆಸ್ ಹೈಕಮಾಂಡ್ ಸೋಲಿನ ವಸ್ತು ಸ್ಥಿತಿ ಅರಿತುಕೊಳ್ಳಲಿ – ಸೈಯದ್ ಯಾಸೀನ್ ಹೇಳಿಕೆ

ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಪಕ್ಷದ ರಾಷ್ಟ್ರ ಮತ್ತು ರಾಜ್ಯ ನಾಯಕರು ವಸ್ತುಸ್ಥಿತಿ ಅರಿತುಕೊಂಡು ಅದನ್ನು ಎದುರಿಸುವ ನಿಟ್ಟಿನಲ್ಲಿ ಪಕ್ಷವನ್ನು ಹೊಸ ದಾರಿಯತ್ತ ಕೊಂಡಯ್ಯಬೇಕಿದೆ ಎಂದು ಮಾಜಿ ಶಾಸಕ ಸೈಯದ್ ಯಾಸೀನ್ ಹೇಳಿದರು.

ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಯಾವುದೇ ರಾಜಕೀಯ ಧ್ರುವೀಕರಣವಾಗಿಲ್ಲ. ಅದು ಜನಾದೇಶವಾಗಿದ್ದು, ಅದನ್ನು ಎಲ್ಲರೂ ಸ್ವಾಗತಿಸಬೇಕಿದೆ. ಸರ್ಕಾರಗಳು ಬರುತ್ತವೆ, ಹೋಗುತ್ತವೆ ಅದಕ್ಕೆ ಪಕ್ಷದ ಕಾರ್ಯಕರ್ತರು ಬೇಸರ ಮಾಡಿಕೊಳ್ಳಬಾರದು ಎಂದರು.

ಬಿಜೆಪಿ ಗೆಲುವಿಗೆ ಬಾಲಕೋಟ್ ಮೇಲಿನ ದಾಳಿ ಕಾರಣ ಎನ್ನುವುದು ಸರಿಯಾದುದಲ್ಲ. ದೇಶದ ಗಡಿಯಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ದೇಶದ ರಕ್ಷಣಾ ವಿಷಯದ ಬಗ್ಗೆ ಎಲ್ಲರಿಗೂ ಕಾಳಜಿ ಇರುತ್ತದೆ. ಅದನ್ನು ರಾಜಕೀಯವಾಗಿ ಅರ್ಥೈಯಿಸಿಕೊಳ್ಳುವ ಅಗತ್ಯವಿಲ್ಲ.

ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಸಮರ್ಥ ಅಭ್ಯರ್ಥಿಯಾಗಿದ್ದರೂ ಸ್ಪರ್ಧೆಯಲ್ಲಿ ಸೋತಿದ್ದಾರೆ. ನಾಯಕರು ಮತ್ತು ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಉತ್ತಮವಾಗಿ ಕೆಲಸ ಮಾಡಿದ್ದರೂ ಜನರು ಬಿಜೆಪಿಗೆ ಮನ್ನಣೆ ನೀಡಿದ್ದಾರೆ. ಸೋಲಿನ ಬಗ್ಗೆ ಯಾರನ್ನೂ ದೂರುವುದು ಅಗತ್ಯವಿಲ್ಲ ಎಂದು ಸೈಯದ್ ಯಾಸೀನ್ ಹೇಳಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಸುಧೀಂದ್ರ ಜಾಗೀರದಾರ್, ರಸೂಲ್‌ಸಾಬ್, ಗೌಸ್, ಪದ್ಮಾ, ವಂದನಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *